ಅಂಕ್ಲೇಶ್ಷರ : ಭರೂಚ್ ಜಿಲ್ಲೆಯ ಅಂಕ್ಲೇಶ್ವರದಲ್ಲಿರುವ ಭಾರತ್ ಬಯೋಟೆಕ್‌ನ ನೂತನ ಉತ್ಪಾದನಾ ಘಟಕದಿಂದ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಬ್ಯಾಚ್‌ಅನ್ನು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಭಾನುವಾರ ಬಿಡುಗಡೆ ಮಾಡಿದರು.
'ವಾಣಿಜ್ಯ ಉದ್ದೇಶದ ಮೊದಲ ಬ್ಯಾಚ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಬಿಡುಗಡೆ ಮಾಡಲಾಯಿತು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯ ಪಾತ್ರ ಮಹತ್ವದ್ದು' ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಈ ಕ್ರಮದಿಂದ ಲಸಿಕೆ ಪೂರೈಕೆ ಹೆಚ್ಚುವುದು. ಆ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ವೇಗ ಸಿಗುವುದು' ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಭಾರತ್ ಬಯೋಟೆಕ್ ಕಂಪನಿಯ ಉತ್ಪಾದನಾ ಘಟಕವನ್ನು ಅಂಕ್ಲೇಶ್ಚರದಲ್ಲಿ ಸ್ಥಾಪಿಸಲು ಆಗಸ್ಟ್ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಈ ಘಟಕದಲ್ಲಿ ಕೋವ್ಯಾಕ್ಸಿನ್‌ನ 20 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಾಗುವುದು ಎಂದು ಕಂಪನಿ ಘೋಷಿಸಿದೆ.