ಕಾಸರಗೊಡು : ಸರ್ಕಾರದ ಕೆಲವು ನಿಯಮ ನಿಬಂಧನೆಗಳು ಜನಸಾಮಾನ್ಯರಿಗೆ ಎಷ್ಟು ಸವಾಲುಗಳಾಗುತ್ತವೆ ಎನ್ನುವುದಕ್ಕೆ ನಿತ್ಯ ನಿದರ್ಶನಗಳು ಹಲವು ಸಿಗುತ್ತಿವೆ. ಆದರೆ ಈ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಯಾವುದೇ ನಿವಾರಣೋಪಾಯಗಳು ಸುಲಭದಲ್ಲಿ ಲಭಿಸದಿರುವುದು ಅಷ್ಟೇ ಸತ್ಯ.
ಕಾಸರಗೋಡಿನ ನ್ಯಾಯವಾದಿ ಪ್ರದೀಪ್ ರಾವ್ ಮೇಪೊಡು ಸ್ವಯಂ ಜೀವ ರಕ್ಷಣೆಗೆ ರಿವಾಲ್ವರ್ ಪರವಾನಿಗೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಕಚೇರಿಯು ಅರ್ಜಿದಾರರು ಈಗಾಗಲೇ ಕೃಷಿ ರಕ್ಷಣೆಗೆ ಡಬ್ಬಲ್ ಬ್ಯಾರೆಲ್ ಬಂದೂಕು ಪರವಾನಿಗೆ ಹೊಂದಿದವರಾದರೂ ರಿವಾಲ್ವರ್ ಪರವಾನಿಗೆ ಅರ್ಜಿಯೊಂದಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸುರಕ್ಷತೆ ತರಬೇತಿ ಪ್ರಮಾಣ ಪತ್ರ ಸಮರ್ಪಿಸುವಂತೆ ಸೂಚಿಸಿತ್ತು.
ಭಾರತೀಯ ಶಸ್ತ್ರಾಸ್ತ್ರ ನಿಯಮ 2016 ರ ನಿಯಮ 10(1) ರ ಪ್ರಕಾರ ಶಸ್ತ್ರಾಸ್ತ್ರ ಪರವಾನಿಗೆಗೆ ಅರ್ಜಿಸಲ್ಲಿಸುವ ಅರ್ಜಿದಾರರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸುರಕ್ಷತೆ ತರಬೇತಿಯನ್ನು ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ತರಬೇತುದಾರರಿಂದ ತರಬೇತಿ ಪಡೆದು ಪ್ರಮಾಣ ಪತ್ರವನ್ನು ಪರವಾನಿಗೆ ಅರ್ಜಿಯೊಂದಿಗೆ ನೀಡಬೇಕೆಂಬುದನ್ನು ಕಡ್ಡಾಯಗೊಳಿಲಾಗಿತ್ತು . ಶಸ್ತ್ರಾಸ್ತ್ರ ನಿಯಮ 2016 ನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರವು ಶಸ್ತ್ರಾಸ್ತ್ರ ತರಬೇತುದಾರ ಪರವಾನಿಗೆ, ನೇಮಕ, ತರಬೇತಿಯ ಕಾಲಾವಧಿ ಹಾಗೂ ತರಬೇತಿ ನಡೆಸಬೇಕಾದ ಸ್ಥಳಗಳ ಕುರಿತು ಸುತ್ತೋಲೆ ಹೊರಡಿಸುವುದಾಗಿ ತಿಳಿಸಿದರೂ ಯಾವುದೇ ಸುತ್ತೋಲೆ ಹೊರಡಿಸಲ್ಲಿಲ್ಲ.
ಕೇಂದ್ರ ಗೃಹ ಸಚಿವಾಲಯ ಜನವರಿ 2018 ರಲ್ಲಿ ಶಸ್ತ್ರಾಸ್ತ್ರ ನಿಯಮಗಳು 2016 ರ ನಿಯಮ 10(3) ಬಗ್ಗೆ ಹೊರಡಿಸಿರುವ ಸ್ಪಷ್ಟೀಕರಣ ಪತ್ರದಲ್ಲಿ ಮೇಲೆ ತಿಳಿಸಿದ ಸುತ್ತೋಲೆ ಪ್ರಕಟಣೆ ಗೊಳ್ಳುವವರೆಗೆ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರ ತರಬೇತುದಾರರು ಶಸ್ತ್ರಾಸ್ತ್ರ ಪರವಾನಿಗೆ ಅರ್ಜಿದಾರರಿಗೆ ತರಬೇತಿಯನ್ನು ನೀಡಿ ತರಬೇತಿ ಪ್ರಮಾಣಪತ್ರವನ್ನು ನೀಡಬೇಕಾಗಿ ಮಾರ್ಗದರ್ಶನ ನೀಡಿತ್ತು. ರಾಜ್ಯ ಸರಕಾರವು ಕೇಂದ್ರ ಗೃಹ ಸಚಿವಾಲಯದ ಸ್ಪಷ್ಟೀಕರಣ ಪತ್ರದ ಪ್ರಕಾರ ಯಾವುದೇ ಕ್ರಮವನ್ನು ಕೈಗೊಳ್ಳದ ಕಾರಣ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು, ಕೇಂದ್ರ ಗೃಹ ಸಚಿವಾಲಯದ ಸ್ಪಷ್ಟೀಕರಣ ಪತ್ರದ ಪ್ರಕಾರ ಎಲ್ಲಾ ಶಸ್ತ್ರಾಸ್ತ್ರ ಪರವಾನಿಗೆ ಅರ್ಜಿದಾರರಿಗೆ ಕೇರಳ ಸರಕಾರ ಹಾಗೂ ಪೊಲೀಸ್ ಇಲಾಖೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಸುರಕ್ಷತೆ ತರಬೇತಿಯನ್ನು ಆಯೋಜಿಸಿ ತರಬೇತಿ ಪ್ರಮಾಣ ಪತ್ರವನ್ನು ನೀಡುವಂತೆ ಕೇರಳದ ಹೈಕೋರ್ಟ್ ನಲ್ಲಿ ರಿಟ್ ಹರ್ಜಿ ಸಮರ್ಪಿಸಿದ್ದಾರೆ. ರಿಟ್ ಹರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಇದೇ ತಿಂಗಳ 25 ನೇ ತಾರೀಕಿಗೆ ರಿಟ್ ಹರ್ಜಿಯ ವಿಚಾರಣೆ ನಡೆಸಲಿದೆ.