HEALTH TIPS

ಕೇರಳದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವರ ಭೇಟಿ

              ತಿರುವನಂತಪುರಂ: ಕೇರಳದಲ್ಲಿ ಎರಡು ವಾರಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ್ದರೂ, ದೇಶದ ಸರಾಸರಿ ಪ್ರಕರಣಗಳಿಗೆ ಹೋಲಿಸಿದರೆ ಕೇರಳ ಒಂದರಲ್ಲೇ ಅರ್ಧದಷ್ಟು ಹೊಸ ದೈನಂದಿನ ಪ್ರಕರಣಗಳು ದಾಖಲಾಗುತ್ತಿವೆ.

           ಭಾನುವಾರ ರಾಜ್ಯದಲ್ಲಿ 18582 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಆತಂಕ ಇನ್ನೂ ತಗ್ಗಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಕೇರಳಕ್ಕೆ ಭೇಟಿ ನೀಡಲಿದ್ದಾರೆ.

            ಕೊರೊನಾ ಏರಿಕೆ ಸಂಬಂಧ ಎರಡು ವಾರಗಳ ಹಿಂದಷ್ಟೆ ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಮಾಂಡವಿಯಾ ಮಾತುಕತೆ ನಡೆಸಿದ್ದರು. ಇದೀಗ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ.


             ಕೇರಳದಲ್ಲಿ ಇದುವರೆಗೂ 3.67 ಮಿಲಿಯನ್ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದುವರೆಗೂ ಸೋಂಕಿನಿಂದ 18601 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 3492367 ಮಂದಿ ಗುಣಮುಖರಾಗಿದ್ದಾರೆ. 178630 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

               ರಾಜ್ಯದಲ್ಲಿ ಸದ್ಯಕ್ಕೆ ಸೋಂಕಿನ ಪಾಸಿಟಿವಿಟಿ ಪ್ರಮಾಣ 15.11% ಇದೆ. ಭಾನುವಾರ ಮಲಪ್ಪುರಂ, ತ್ರಿಶೂರ್, ಕೋಯಿಕ್ಕೋಡ್, ಎರ್ನಾಕುಲಂ- ಈ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 2000 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೇರಳದ ಹಲವು ಜಿಲ್ಲೆಗಳಲ್ಲಿ ಸುಮಾರು 499000 ಮಂದಿ ಕಣ್ಗಾವಲಿನಲ್ಲಿದ್ದಾರೆ.

           27,636 ಮಂದಿ ಆಸ್ಪತ್ರೆಯಲ್ಲಿದ್ದು, 471395 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ದೇಶದಲ್ಲಿ ಅರ್ಧದಷ್ಟು ಪ್ರಮಾಣದ ಸೋಂಕು ಕೇರಳ ರಾಜ್ಯವೊಂದರಲ್ಲೇ ದಾಖಲಾಗುತ್ತಿದೆ. "ಆದರೆ ರಾಜ್ಯದ ಕೊರೊನಾ ಸ್ಥಿತಿ ಆತಂಕಡುವಂತಿಲ್ಲ. ಸರ್ಕಾರ ಸೋಂಕು ನಿಯಂತ್ರಣಕ್ಕೆ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

         "ಹೆಚ್ಚಿನ ಪ್ರಮಾಣದ ಕೊರೊನಾ ಲಸಿಕೆಗಳಿಗಾಗಿ ಕೇಂದ್ರದ ಬಳಿ ಬೇಡಿಕೆ ಇಟ್ಟಿದ್ದೇವೆ. ಕಳೆದ ವಾರಕ್ಕಿಂತ ಈ ವಾರ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಆಸ್ಪತ್ರೆಗಳು ಹಾಗೂ ಐಸಿಯುಗಳಲ್ಲಿ ದಾಖಲಾಗುವವರ ಪ್ರಮಾಣ ಕಡಿಮೆಯಿದೆ" ಎಂದು ವಿವರಿಸಿದ್ದಾರೆ.

         ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಭೇಟಿ ಮಾಡಿ ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಸಲಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರು ಹಾಗೂ ಆರೋಗ್ಯ ಸಚಿವಾಲಯದ ಇನ್ನಿತರೆ ಅಧಿಕಾರಿಗಳು ಮಾಂಡವಿಯಾ ಅವರೊಂದಿಗೆ ಕೇರಳಕ್ಕೆ ತೆರಳುವುದಾಗಿ ಮೂಲಗಳು ತಿಳಿಸಿವೆ.

          ಈಚೆಗೆ ಕೇರಳಕ್ಕೆ ಭೇಟಿ ನೀಡಿದ ಮತ್ತು ಕೇಂದ್ರಕ್ಕೆ ವಿವರವಾದ ವರದಿ ಸಲ್ಲಿಸಿದ್ದ ನ್ಯಾಷನಲ್ ಸೆಂಟರ್ ಫಾರ್‌ ಡಿಸೀಸ್ ಕಂಟ್ರೋಲ್‌ನ ನಿರ್ದೇಶಕ ಡಾ. ಸುಜೀತ್ ಕುಮಾರ್‌ ಸಿಂಗ್‌ ಕೇರಳದಲ್ಲಿ ಕೊರೊನಾ ಹೆಚ್ಚಳದ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಹರಡುವಿಕೆಯು ರಾಜ್ಯದಲ್ಲಿ ಶೇ. 30 ರ ಸಮೀಪದಲ್ಲಿದೆ. ಕೇರಳದ ಪ್ರಸ್ತುತ ಆರ್‌ ಮೌಲ್ಯ 1.12 ಎಂದು ಉಲ್ಲೇಖ ಮಾಡಿದ ಸುಜೀತ್ ಕುಮಾರ್‌ ಸಿಂಗ್‌ "ಪ್ರಸ್ತುತ ಪ್ರವೃತ್ತಿಯ ಪ್ರಕಾರ, ಆಗಸ್ಟ್ 1 ರಿಂದ 20ರ ಅವಧಿಯಲ್ಲಿ, ರಾಜ್ಯವು 4.62 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ," ಎಂದಿದ್ದರು.

          ಮತ್ತಷ್ಟು ಕಠಿಣ ಕ್ರಮಕ್ಕೆ ಸೂಚಿಸಿರುವ ಕೇಂದ್ರ ತಂಡ: ಕೇರಳದಲ್ಲಿ ಸೋಂಕಿನ ನಿಯಂತ್ರಣಕ್ಕೆ ಬಫರ್ ಜೋನ್‌ಗಳನ್ನು ಹೆಚ್ಚಿಸುವ ಅಗತ್ಯವಿದೆ. ಅಲ್ಲದೇ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಆಗಬೇಕಿದೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಈಗ ವಿಧಿಸುವ ನಿರ್ಬಂಧಗಳನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಕೇರಳದಲ್ಲಿ ಸದ್ಯ ಸೋಂಕಿತರ ಪತ್ತೆ ಪ್ರಮಾಣ 1:5ರಷ್ಟಿದೆ. ಆದರೆ ಇದನ್ನು 1:20ಕ್ಕೆ ಹೆಚ್ಚಳ ಮಾಡಬೇಕಿದೆ. ಇದುವೇ ಸೋಂಕು ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹೋಂ ಐಸೊಲೇಷನ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಕೇಂದ್ರ ಸಮಿತಿ ಹೇಳಿದೆ.

           ಕೊರೊನಾ ನಿಯಂತ್ರಣಕ್ಕೆ ಇದೀಗ ಎಲ್ಲಾ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆಯೇ ಎಂಬ ಕುರಿತು ವಿಶ್ಲೇಷಣೆ, ಪರಿಶೀಲನೆ ನಡೆಸಲು ಮಾಂಡವಿಯಾ ಕೇರಳಕ್ಕೆ ಭೇಟಿ ನೀಡಲಿದ್ದಾರೆ.

ಕೇರಳ ನಂತರ ಮಂಗಳವಾರ, ಸೋಂಕು ಅಧಿಕವಿರುವ ಅಸ್ಸಾಂ ರಾಜ್ಯಕ್ಕೂ ಭೇಟಿ ನೀಡಲಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries