ಬದಿಯಡ್ಕ: ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಮಾನವನು ಬದಲಾಗುವ ಲೋಕಕ್ಕೆ ಅನುಗುಣವಾಗಿ ಬದುಕುತ್ತಿದ್ದಾನೆ. ತಾಂತ್ರಿಕ ಆವಿಷ್ಕಾರಗಳು ಇಂದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ. ಇದಕ್ಕೆ ಸಾಹಿತ್ಯ, ಸಾಂಸ್ಕೃತಿಕ ಲೋಕವೂ ಹೊರತಾಗಿಲ್ಲ. ಶೈಕ್ಷಣಿಕವಾಗಿ ಡಿಜಿಟಲ್ ಲೋಕಕ್ಕೆ ತೆರೆದುಕೊಳ್ಳುವುದು ಅಗತ್ಯವಾದುದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಅಭಿಪ್ರಾಯಪಟ್ಟರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಹದಿನಾಲ್ಕನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಾಹಿತ್ಯ ಚಟುವಟಿಕೆಗಳು ಒಳಗನ್ನು ತೆರೆಯುವ ಕೆಲಸವನ್ನು ನಿರ್ವಹಿಸುತ್ತವೆ. ಹೊಸ ತಂತ್ರಜ್ಞಾನದ ಬಳಕೆಯ ಸಾಧ್ಯತೆಯನ್ನು ಸಾಹಿತ್ಯಲೋಕದೊಳಗೆ ಹುಡುಕುವ ಕೆಲಸ ನಡೆಯಬೇಕಾಗಿದೆ. ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ನುಡಿಯ ಸರಹದ್ದುಗಳನ್ನು ದಾಟಬೇಕು. ಸಾಹಿತ್ಯವನ್ನು ವಿಶ್ವಾತ್ಮಕಗೊಳಿಸುವ ಕಾರ್ಯ ನಡೆಯಬೇಕು. ವರ್ತಮಾನದಲ್ಲಿ ಮಾನವ ನಡೆಸುವ ಬೌದ್ಧಿಕ ವ್ಯವಹಾರಗಳು ಸೀಮಾತೀತವಾಗಿ ವಿಸ್ತರಣೆಯಾಗುತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ಪ್ರತಿಬಿಂಬಿತಗೊಳ್ಳುವ ಸಂಸ್ಕೃತಿ ಜೀವನಕ್ರಮವನ್ನು ಜಾಗತಿಕವಾಗಿ ವಿಸ್ತರಿಸುವ ಬಗ್ಗೆ ಯುವ ಸಮುದಾಯ ಕಾರ್ಯಪ್ರವೃತ್ತರಾಗಬೇಕು. ಬಹುಭಾಷೆಗಳ ಅರಿವು ಭಿನ್ನ ಸಂಸ್ಕೃತಿಗಳನ್ನು ತಿಳಿಯಲು ಅನುಕೂಲಕರವಾದುದು. ಕನ್ನಡದ ಸಾಂಸ್ಕೃತಿಕ ಪಠ್ಯಗಳು ಜಗತ್ತಿಗೆ ಪರಿಚಯವಾಗಬೇಕು. ಕನ್ನಡದಿಂದ ಇತರ ಭಾಷೆಗಳಿಗೆ ಅನುವಾದ ಕಾರ್ಯವು ಅಗತ್ಯವಾಗಿ ನಡೆಯಬೇಕು. ಗಡಿಯಾಚೆಗೆ ನುಡಿ ನಡಿಗೆ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ಸಾಹಿತ್ಯವನ್ನು ಆಧುನಿಕ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಸಂಶೋಧನೆ, ಸಂಪಾದನೆ ಮಾಡಿದವರು ಪಾಶ್ಚತ್ಯ ವಿದ್ವಾಂಸರು. ಬಾಸೆಲ್ ಮಿಶನ್ ಮೂಲಕ ನಡೆದ ಕನ್ನಡದ ಕೆಲಸವು ಅಪೂರ್ವವಾದುದು. ನಂತರದಲ್ಲಿ ಕನ್ನಡದ ವಿದ್ವಾಂಸರಾದ ಎ.ಕೆ ರಾಮಾನುಜನ್, ಯು ಆರ್ ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಗಿರೀಶ್ ಕಾರ್ನಾಡ್ ಮೊದಲಾದವರು ಕನ್ನಡ ಪಠ್ಯಗಳನ್ನು ಜಾಗತಿಕವಾಗಿ ವಿಸ್ತರಿಸಿದರು. ಈ ಹಂತದಲ್ಲಿ ಕನ್ನಡವನ್ನು ಸೈದ್ಧಾಂತಿಕವಾಗಿ ಬೆಳೆಸುವ ಕೆಲಸವು ಸಶಕ್ತವಾಗಿ ನಡೆಯಿತು. ಕನ್ನಡದ ಕೃತಿಗಳನ್ನು ಅನ್ಯ ಭಾಷೆಗಳಿಗೆ ತಲುಪಿಸುವ ರಾಯಭಾರತ್ವವು ಮುಖ್ಯವಾದುದು. ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪರಿಣತರಾಗುವ ಅಗತ್ಯತೆ ಇದೆ. ಈ ಮೂಲಕ ಸಾಹಿತ್ಯವನ್ನು ಗಡಿಯಾಚೆಗೆ ತಲುಪಿಸಬಹುದು. ಅವಕಾಶಗಳು ನಮ್ಮ ಮುಂದಿವೆ. ಇರುವ ಅವಕಾಶಗಳನ್ನೇ ಶೈಕ್ಷಣಿಕ ಸಾಧನೆಯ ಮೆಟ್ಟಿಲನ್ನಾಗಿಸಬೇಕು ಎಂದರು.
ಕೇಂದ್ರೀಯ ವಿ.ವಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಸೌಮ್ಯ., ಪ್ರಸ್ತಾವನೆಯ ಮಾತುಗಳನ್ನಾಡಿ, ಸಾಹಿತ್ಯ ಕಾರ್ಯಕ್ರಮವು ಮನಸ್ಸನ್ನು ಅರಳಿಸುವ ಕೆಲಸವನ್ನು ಮಾಡುತ್ತದೆ. ಕನ್ನಡವನ್ನು ಗಡಿಯಾಚೆಗೆ ವಿಸ್ತರಿಸುವ ಕೆಲಸವು ಮುಖ್ಯ ಎಂದರು.
ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಶಿಲ್ಪ ಕೆ ವಿ., ಸ್ವಾಗತಿಸಿ, .,ಸ್ವಾತಿ ಜಿ. ವಂದಿಸಿದರು. ರೋಶನಿ ಕಾರ್ಯಕ್ರಮ ನಿರೂಪಿಸಿದರು.