ಮೂನ್ನಾರ್: ಗೂಗಲ್ ಮ್ಯಾಪ್ ನೋಡಿ ಮುನ್ನಾರ್ ನಿಂದ ಹಿಂದಿರುಗಿದ ಕುಟುಂಬ ಒಂಬತ್ತು ಗಂಟೆಗಳ ಕಾಲ ಕಾಡಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಕೊನೆಗೆ ಅಗ್ನಿಶಾಮಕ ದಳದ ಸಹಾಯದಿಂದ, ತಂಡ ದಟ್ಟಡವಿಯಿಂದ ರಕ್ಷಣೆಗೊಂಡಿತು. ಭಾರತದಲ್ಲಿ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ಮುಖ್ಯ ಸಂಯೋಜಕರಾದ ನವಾಬ್ ವಾಹಿದ್ ಮತ್ತು ಅವರ ಪತ್ನಿ ನೇಮಮಾ ಮತ್ತು ಅವರ ಸೋದರ ಸಂಬಂಧಿ ಭಾನುವಾರ ರಾತ್ರಿ ಕಾಡಿನಲ್ಲಿ ಸಿಲುಕಿಕೊಂಡವರು. ದೇವಿಕುಳಂ ಬಳಿಯ ಕುಟ್ಟಿಯರ್ವಾಲಿಯಲ್ಲಿ ಈ ಘಟನೆ ನಡೆದಿದೆ.
ಅಧಿಕೃತ ಉದ್ದೇಶಗಳಿಗಾಗಿ ಮುನ್ನಾರ್ ತಲುಪಿದ ತಂಡ, ಹಿಂತಿರುಗುವಾಗ ಗೂಗಲ್ ಮ್ಯಾಪ್ ಸಹಾಯದಿಂದ ಸಂಚರಿಸುತ್ತಾ ಅರಣ್ಯವನ್ನು ಹೊಕ್ಕಿತು. ವಾಹನವು ರಸ್ತೆಯ ಕೆಸರಿನಲ್ಲಿ ಸಿಲುಕಿದ್ದರಿಂದ ಅವರಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಅವರು ವನ್ಯಜೀವಿಗಳಿಂದ ಆವೃತ್ತವಾಗಿದ್ದ ದಟ್ಟಡವಿಯ ಮಧ್ಯೆ ಸಿಲುಕಿದ್ದರಿಂದ ಬೇರೆ ಸಹಾಯಗಳು ಲಭ್ಯವಾಗಲಿಲ್ಲ. ವಾಹನವು ಮುಂದೆ ಸಾಗಲು ಸಾಧ್ಯವಾಗದಿದ್ದಾಗ, ನವಾಬ್ ವಾಹಿದ್ ತುರ್ತು ಸಂಖ್ಯೆ 101 ಕ್ಕೆ ಮಾಹಿತಿ ನೀಡಿದರು.
ನಂತರ ಮುನ್ನಾರ್ ಅಗ್ನಿಶಾಮಕ ಸಿಬ್ಬಂದಿ ಆ ಪ್ರದೇಶದಲ್ಲಿ ಶೋಧ ಆರಂಭಿಸಿದರು. ಅವರು ದೇವಿಕುಳಂ, ಲಕ್ಕಾಡ್, ಮನಿಲಾ ಮತ್ತು ಮಟ್ಟುಪೆಟ್ಟಿಗಳಲ್ಲಿನ ಎಸ್ಟೇಟ್ ಮತ್ತು ಕಾಡುಗಳಲ್ಲಿ ಹುಡುಕಾಟ ನಡೆಸಿದರು. ಆದರೆ ತಂಡವನ್ನು ಪತ್ತೆಹಚ್ಚಲು ವಿಫಲರಾದರು. ಮುಂಜಾನೆ 5.20 ಕ್ಕೆ, ದೇವಿಕುಳಂ ರಸ್ತೆಯಿಂದ ಗುಡರವಿಲ ರಸ್ತೆಗೆ ಹಾದುಹೋದ ಅಗ್ನಿಶಾಮಕ ದಳದ ವಾಹನದ ಮಿನುಗುವ ಬೆಳಕನ್ನು ಕಂಡು ನವಾಬ್ ನಿರಂತರ ಹಾರ್ನ್ ಬಾರಿಸಿದರು. ಇದರೊಂದಿಗೆ, ಪಡೆಗಳು ವಾಹನದಲ್ಲಿದ್ದವರತ್ತ ದೌಡಾಯಿಸಿ ಸ್ಥಳಾಂತರಿಸಿದರು. ಬಳಿಕ ಹೂತುಹೋಗಿದ್ದ ವಾಹನವನ್ನು ಸುರಕ್ಷಿತವಾಗಿ ಹೊರತೆಗೆದರು.