ನವದೆಹಲಿ: ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಆಪರೇಷನ್ ದೇವಿ ಶಕ್ತಿ ಮುಂದುವರಿಯುತ್ತದೆ. ಕಾಬೂಲ್ ನಿಂದ 78 ಸ್ಥಳಾಂತರಗೊಂಡವರು ದುಶಾನ್ಬೆ ಮೂಲಕ ಭಾರತಕ್ಕೆ ಆಗಮಿಸುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರದಿಂದ ವಾಯುಪಡೆಯ ವಿಮಾನದ ಮೂಲಕ 25 ಭಾರತೀಯರು ಮತ್ತು 46 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ 78 ಜನರನ್ನು ಕರೆತರಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಾಯುಪಡೆ, ಏರ್ ಇಂಡಿಯಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಯ ಅವಿರತ ಪ್ರಯತ್ನಕ್ಕೆ ಅಭಿನಂದನೆಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಫ್ಗನ್ ರಾಜಧಾನಿಯನ್ನು ತಾಲಿಬಾನ್ ವಶಪಡಿಸಿಕೊಂಡು ಒಂದು ದಿನದ ನಂತರ ಆ. 16ರಂದು ಕಾಬೂಲ್‌ನಿಂದ ದೆಹಲಿಗೆ 40 ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಮೂಲಕ ಭಾರತ ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು.
ಕಾಬೂಲ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಇಲ್ಲಿಯವರೆಗೆ ಭಾರತವು 800ಕ್ಕೂ ಹೆಚ್ಚು ಜನರನ್ನು ಅಲ್ಲಿಂದ ಸ್ಥಳಾಂತರಿಸಿದೆ.