ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಸದನದಲ್ಲಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಕೇರಳದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲು ತಮ್ಮ ಸರ್ಕಾರವು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಆಗಸ್ಟ್ 2 ರಿಂದ ಕೇರಳದಿಂದ ಬರುವ ಪ್ರಯಾಣಿಕರಿಗೆ ಲಸಿಕೆ ಸ್ಥಿತಿಗತಿ ಲೆಕ್ಕಿಸದೆ ಆರ್ ಟಿ- ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯಪಡಿಸಿದೆ. ಚಿಕ್ಕ ರಸ್ತೆಗಳನ್ನು ನಿರ್ಬಂಧಿಸಿದ್ದು, ಆರ್ ಟಿ- ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ಇರುವವರನ್ನು ಹೊರತುಪಡಿಸಿ ಉಳಿದವರನ್ನು ತಡೆಯಲು ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ.
ಆಗಸ್ಟ್ 2 ರಿಂದ ಆರ್ ಟಿ- ಪಿಸಿಆರ್ ಪರೀಕ್ಷಾ ವರದಿ ಇಲ್ಲದೆ ಬಂದಂತಹ 650 ಕೇರಳದವರ ಪರೀಕ್ಷೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸಿದ್ದು, ಕೇವಲ ನಾಲ್ಕು ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಹೊಸ ನಿಯಮಾವಳಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳೊಂದಿಗೆ ಘರ್ಷಣೆ ಉಂಟು ಮಾಡುತ್ತವೆ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಗೃಹ ಸಚಿವಾಲಯದ ಆದೇಶದ ಪ್ರಕಾರ, ರಾಜ್ಯಗಳು ನಿರ್ಬಂಧ ಹೇರುವಂತಿಲ್ಲ, ಅಥವಾ ಗಡಿ ಬಂದ್ ಮಾಡುವಂತಿಲ್ಲ, ಜನರ ಪ್ರವೇಶ ಮತ್ತು ನಿರ್ಗಮನವನ್ನು ನಿಲ್ಲಿಸುವಂತಿಲ್ಲ, ಆದರೆ, ಆದೇಶ ತರುವ ಮೂಲಕ ನಡೆಯುತ್ತಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ, ಆದ್ದರಿಂದ ಜನರಿಗೆ ಸಹಾಯ ಮಾಡಲು ವ್ಯವಸ್ಥೆ ಮಾಡುತ್ತಿವೆ ಎಂದು ಪಿಣರಾಯ್ ವಿಜಯನ್ ಹೇಳಿದರು. ಎರಡು ಡೋಸ್ ಲಸಿಕೆ ಪಡೆದವರಿಗೆ ಆರ್ ಟಿ- ಪಿಸಿಆರ್ ಪರೀಕ್ಷೆಗೆ ಅನುಮತಿ ನೀಡಲಾಗುತ್ತಿದೆ. ಅಲ್ಲದೇ, ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೇರಳ ವಿಶೇಷವಾಗಿ ಮಂಜೇಶ್ವರದ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹರಿಸಲು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸುವಂತೆ ಅಶ್ರಪ್ ಕೇಳಿಕೊಂಡಿದ್ದರು. ಮಂಜೇಶ್ವರ ಜನರು ಆಸ್ಪತ್ರೆ, ಉದ್ಯೋಗ, ಶಿಕ್ಷಣ, ವ್ಯವಹಾರ, ವಿಮಾನ ಪ್ರಯಾಣಕ್ಕಾಗಿ ಮಂಗಳೂರು ಮೇಲೆ ಅವಲಂಬಿತರಾಗಿದ್ದಾರೆ. ತನ್ನ ಕ್ಷೇತ್ರದ ಅರ್ಧದಷ್ಟು ಜನರ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಮಂಗಳೂರು ಮಹಾನಗರ ಪಾಲಿಕೆಯಿಂದ ನೀಡಲ್ಪಟ್ಟಿವೆ ಎಂದು ಅವರು ಮಂಗಳೂರು ಮೇಲಿನ ಅವಲಂಬನೆಯನ್ನು ಒತ್ತಿ ಹೇಳಿದ್ದರು.
ಕೋವಿಡ್-19 ಮೊದಲ ಅಲೆ ವೇಳೆಯಲ್ಲಿ ಕರ್ನಾಟಕ ಗಡಿ ಬಂದ್ ಮಾಡಿ, ಮಂಗಳೂರು ಆಸ್ಪತ್ರೆಗೆ ಹೋಗಲು ಅವಕಾಶ ನೀಡದಿದ್ದರಿಂದ 22 ಜನರು ಸಾವನ್ನಪ್ಪಿದ್ದಾರೆ. ಈಗ ಆರ್ ಟಿ- ಪಿಸಿಆರ್ ಪರೀಕ್ಷೆ ವರದಿ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದವರನ್ನು ಮಂಗಳೂರಿನ ಟೌನ್ ಹಾಲ್ ನಲ್ಲಿ ಕರ್ನಾಟಕ ಸರ್ಕಾರದಿಂದ ಬಂಧಿಸಲಾಗಿದೆ ಎಂದು ಅಶ್ರಪ್ ಸದನದಲ್ಲಿ ತಿಳಿಸಿದರು.
ಹೊಸ ನಿಯಮಾವಳಿಗಳಿಂದ ಕೇರಳ ಜನರ ಸಂಪರ್ಕಕ್ಕೆ ತೊಂದರೆಯಾಗದಂತೆ ಖಾತ್ರಿಗೊಳಿಸುವಂತೆ ಕೇರಳ ರಾಜ್ಯದ ಪೊಲೀಸ್ ಮುಖ್ಯಸ್ಥರು, ಕರ್ನಾಟಕದ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ. ಅದಕ್ಕೆ ಸೂಕ್ತ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಿಳಿಸಿದರು.