ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶದ ವೇಳೆ ವರದಕ್ಷಿಣೆ ವಿರೋಧಿ ಅಫಿಡವಿಟ್ ಗೆ ಒತ್ತಾಯಿಸಿದ್ದಾರೆ. ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಮುಂದಿಟ್ಟಿರುವುದಾಗಿ ಅವರು ಹೇಳಿದರು. ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ವಧುವನ್ನು ಬಳಸಿ ಆಭರಣಗಳ ಜಾಹೀರಾತು ನೀಡುವುದನ್ನೂ ನಿಯಂತ್ರಿಸಬೇಕು. ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ. ಚಿನ್ನದ ಆಭರಣಗಳನ್ನು ಧರಿಸುವ ಬದಲು, ಸಾಮಾನ್ಯ ಹುಡುಗಿಯರನ್ನು ಮಾದರಿಯನ್ನಾಗಿಸಬೇಕು ಎಂದು ರಾಜ್ಯಪಾಲರು ಸೂಚಿಸಿದರು.
ವರದಕ್ಷಿಣೆ ಬಗ್ಗೆ ಜಾಗೃತಿ ಶಾಲಾ ಮಟ್ಟದಿಂದಲೇ ಹರಡಬೇಕು. ವರದಕ್ಷಿಣೆ ವಿರುದ್ಧ ಕೇರಳದ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಇದೆ. ಇದು ಮುಂದುವರಿಯುವ ಅಗತ್ಯವಿದೆ. ಕೇರಳದಲ್ಲಿ ಇನ್ನೆಂದೂ ವರದಕ್ಷಿಣೆ ಬಗೆಗಿನ ಹತ್ಯೆ, ಕಿರುಕುಳಗಳು ಆಗಬಾರದು ಎಂದು ಹೇಳಿದರು.
ರಾಜ್ಯದಲ್ಲಿ ವ್ಯಾಪಕ ವರದಕ್ಷಿಣೆ ಕಿರುಕುಳ ಮತ್ತು ಸಾವುಗಳ ಹಿನ್ನೆಲೆಯಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಮಹತ್ವಪಡೆದಿದೆ. ಪದವಿ ಪ್ರದಾನ ಸಮಾರಂಭದಲ್ಲಿ ವರದಕ್ಷಿಣೆ ನೀಡುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ ಎಂದು ವಿದ್ಯಾರ್ಥಿಗಳು ರಾಜ್ಯಪಾಲರಿರೆದುರು ಪ್ರಮಾಣಮಾಡಿ ಗಮನ ಸೆಳೆದರು.