ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಗಣನೆಗೆ ತೆಗೆದುಕೊಂಡ ಕಲ್ಕತ್ತಾ ವಿಶ್ವವಿದ್ಯಾಲಯ, ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳ ಮತ್ತು ಎರಡು ಇನ್‌ಸ್ಟಿಟ್ಯೂಟ್ ನಡೆಸುವ ಪದವಿಪೂರ್ವ ವಿದ್ಯಾರ್ಥಿಗಳ 2021-22ನೇ ಸಾಲಿನ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಿದೆ.
ಅಂತಿಮ ವರ್ಷದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಸಂಗ್ರಹಿಸಲು ತಮ್ಮ ಬಾಕಿ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ವಿವಿಯು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯ ದೃಷ್ಟಿಯಿಂದ, 2021ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಮತ್ತು ವಿದ್ಯಾರ್ಥಿಗಳ (ಪಿಜಿ ಮತ್ತು ಯುನಿವರ್ಸಿಟಿ ಯುಜಿ ವಿದ್ಯಾರ್ಥಿಗಳು) ಪರೀಕ್ಷಾ ಶುಲ್ಕಗಳಂತಹ ಎಲ್ಲಾ ಶುಲ್ಕಗಳನ್ನು ವಿಶ್ವವಿದ್ಯಾಲಯ ಮನ್ನಾ ಮಾಡಿದೆ ಎಂದು ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಲಾಗಿದೆ.
ವಿವಿಧ ಸೆಮಿಸ್ಟರ್ ಪರೀಕ್ಷೆಗಳ ಅಂಕಪಟ್ಟಿ/ಗ್ರೇಡ್ ಶೀಟ್‌ಗಳನ್ನು ಸಂಗ್ರಹಿಸಲು ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ "ಎಂದು ಹಂಗಾಮಿ ರಿಜಿಸ್ಟ್ರಾರ್ ದೇಬಾಸಿಸ್ ದಾಸ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು 164 ವರ್ಷ ಹಳೆಯ ವಿಶ್ವವಿದ್ಯಾನಿಲಯದ ಉಪಕುಲಪತಿ ಸೊನಾಲಿ ಚಕ್ರವರ್ತಿ ಬಂಡೋಪಾಧ್ಯಾಯ ಅವರು ಪಿಟಿಐಗೆ ತಿಳಿಸಿದ್ದಾರೆ.