ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಸೇವೆಯನ್ನು ಕೇಂದ್ರ ಸರ್ಕಾರ ಒಂದು ವರ್ಷ ಕಾಲ ವಿಸ್ತರಿಸುವ ತೀರ್ಮಾನ ತೆಗೆದುಕೊಂಡಿದೆ.
ಅಜಯ್ ಕುಮಾರ್ ಭಲ್ಲಾ ಅವರ ಹಾಲಿ ಸೇವೆ ಮುಂದಿನವಾರ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರ ಸೇವೆಯನ್ನು ಮತ್ತೆ ಒಂದು ವರ್ಷ ವಿಸ್ತರಿಸಿದೆ.
ಅಸ್ಸಾಂ-ಮೇಘಾಲಯ ಕೇಡರ್‌ನ 1984ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಭಲ್ಲಾ ಅವರು ಆಗಸ್ಟ್ 2019ರಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
"ಸಂಪುಟ ನೇಮಕಾತಿ ಸಮಿತಿಯು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲ ಅವರ ಈಗಿನ ಅವಧಿ, ಅಂದರೆ 22.08.2021 ರಿಂದ ಒಂದು ವರ್ಷ ವಿಸ್ತರಿಸಲು ಅನುಮೋದನೆ ನೀಡಿದೆ" ಎಂದು ಸಿಬ್ಬಂದಿ ಸಚಿವಾಲಯದಿಂದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಅಧಿಕಾರಾವಧಿಯನ್ನು ಆಗಸ್ಟ್ 22, 2021 ರವರೆಗೆ ವಿಸ್ತರಿಸಲಾಗಿತ್ತು. ಭಲ್ಲಾ ಅವರು 60 ವರ್ಷ ಪೂರ್ಣಗೊಳಿಸಿದ ನಂತರ ನವೆಂಬರ್ 2020ರಲ್ಲಿ ನಿವೃತ್ತರಾಗಬೇಕಿತ್ತು. ಆದರೆ ಈಗ ಎರಡನೇ ಬಾರಿ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದೆ.