ಬದಿಯಡ್ಕ: ಸಾಮಾನ್ಯವಾಗಿ ಮಠ-ಮಂದಿರಗಳಲ್ಲಿ ಧಾರ್ಮಿಕ ಧ್ವಜಗಳ ಆರೋಹಣ, ಉತ್ಸವಗಳು ಸಾಮಾನ್ಯ ಆದರೆ ಶಂಕರಾಚಾರ್ಯ ಪರಂಪರೆಯ ಶ್ರೀಮದ್ ಎಡನೀರು ಮಠದಲ್ಲಿ ಇವೆಲ್ಲಕ್ಕಿಂತ ಭಿನ್ನವಾಗಿ ರಾಷ್ಟ್ರ ಧ್ವಜಸ್ತಂಭದ ಉದ್ಘಾಟನೆ, ಧ್ವಜಾರೋಹಣದ ಹೊಸ ಪರಿಕಲ್ಪನೆಯೊಂದಕ್ಕೆ ನಾಂದಿಹಾಡುವ ಮೂಲಕ ಮಠ ಮತ್ತೊಮ್ಮೆ ರಾಷ್ಟ್ರ ಹಿತದ ತನ್ನ ನಿಲುವನ್ನು ಸಾಬೀತುಪಡಿಸಿದೆ.
ದಶಕಗಳ ಹಿಂದೆ ರಾಷ್ಟ್ರದ ಸಂವಿಧಾನದಲ್ಲಿ ಕೆಲವು ಮೂಲಭೂತ ವಿಷಯಗಳನ್ನು ತಿದ್ದುಪಡಿಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಎಡನೀರು ಕೇಶವಾನಂದ ಭಾರತೀ ವರ್ಸರ್ಸ್ ಕೇರಳ ಸರ್ಕಾರ ಆಕ್ಟ್ ರೂಪುಗೊಂಡು ಸಂವಿಧಾನಕ್ಕೆ ಭದ್ರ ಬುನಾದಿಯೊಂದನ್ನು ಹಾಕಿತ್ತು. ಅಷ್ಟೇ ಪ್ರಾಮುಖ್ಯತೆಯ ಹೊಸತೊಂದು ವಿಚಾರಕ್ಕೆ ಇದೀಗ ಶ್ರೀಮಠ ಮತ್ತೊಮ್ಮೆ ನಾಂದಿ ಹಾಡಿದ್ದು, ಇತರೆಡೆಗಳಿಗೆ ಅನುಸರಣೀಯವಾದುದುದಾಗಿದೆ.
ಶ್ರೀಮಠದ ಆವರಣದಲ್ಲೇ, ಮಠದ ಎದುರು ಭಾಗದಲ್ಲಿ ನೂತನ ಧ್ವಜಸ್ತಂಭ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಸ್ವಾತಂತ್ರ್ಯೋತ್ಸವದ 75ನೇ ಸಂಭ್ರಮದ ಹಿನ್ನೆಲೆಯಲ್ಲಿ ನಿರ್ವಹಿಸಲ್ಪಟ್ಟಿತು.
ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಧ್ವಜಾರೋಹಣಗೈದು ಆಶೀರ್ವಚನ ನೀಡಿದರು. ಅವರು ಮಾತನಾಡಿ ದೇಶಭಕ್ತಿ ಮತ್ತು ದೇವಭಕ್ತಿಗಳೆಂಬ ಎರಡು ಬಗೆಯ ಚಿಂತನೆಗಳು ನಮ್ಮಲ್ಲಿದ್ದರೆ ಸುಭಿಕ್ಷ ನೆಲೆಗೊಳ್ಳುತ್ತದೆ. ಇದರ ಜೊತೆಗೆ ದೇಹದ ಬಗೆಗೂ ಕಾಳಜಿ ಉಳ್ಳವರಾಗಿ ಮಾರಕ ಕೋವಿಡ್ ಸೋಂಕಿನಿಂತ ಮುಕ್ತರಾಗಿ ಸಾಮಾನ್ಯ ಜನಜೀವನಕ್ಕೆ ಮರಳಲು ಸಾಧ್ಯವಾಗಲಿ ಎಂದು ಶ್ರೀಗಳು ತಿಳಿಸಿದರು.
ಭಾರತೀಯ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ (ಭಾರತೀಯ ಪ್ಯಾರಚೂಟ್ ರೆಜಿಮೆಂಟ್ ) ಉಪಸ್ಥಿತರಿದ್ದು, ನೂತನ ಧ್ವಜಸ್ತಂಭ ಉದ್ಘಾಟಿಸಿ ಮಾತನಾಡಿದರು. ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಠದ ಕಾರ್ಯನಿರ್ವಾಹಕ ರಾಜೇಂದ್ರ ಕಲ್ಲೂರಾಯ, ವೆಂಕಟ್ ಭಟ್ ಎಡನೀರು, ಸೂರ್ಯನಾರಾಯಣ ಎಡನೀರು ಮೊದಲಾದವರು ಉಪಸ್ಥಿತರಿದ್ದರು. .ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಭಾರತಿ ಸ್ವಾಮಿಜಿಯವರ ಪುಣ್ಯ ಸ್ಮರಣೆಗಾಗಿ ಈ ಧ್ವಜಸ್ತಂಭವನ್ನು ವೆಂಕಟ್ ಭಟ್ ಎಡನೀರು ಸೇವಾ ರೂಪದಲ್ಲಿ ನೀಡಿರುತ್ತಾರೆ.