ನವದೆಹಲಿ: ಆಗಸ್ಟ್ 15ರ ಪ್ರಧಾನಿ ಮೋದಿ ಭಾಷಣಕ್ಕೆ ವೇದಿಕೆಯಾಗಲಿರುವ ಕೆಂಪುಕೋಟೆ ಬಳಿಕ ಶಂಕಿತ ಡ್ರೋಣ್ ಪತ್ತೆಯಾಗಿದ್ದು, ಕೂಡಲೇ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಡ್ರೋನ್ ಅನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯಲ್ಲಿರುವ ಕೆಂಪು ಕೋಟೆಯ ಹಿಂಭಾಗದಲ್ಲಿರುವ ವಿಜಯ ಘಾಟ್ ಬಳಿ ಹಾರುತ್ತಿದ್ದ ಡ್ರೋನ್ ಅನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಉತ್ತರ ದೆಹಲಿಯ ಜಾಗ್ವಾರ್ ಹೆದ್ದಾರಿ ಗಸ್ತು ತಂಡವು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ವಿಜಯ್ ಘಾಟ್ ಬಳಿ ಡ್ರೋನ್ ಕಂಡುಬಂದಿದೆ. ಆ ಸಮಯದಲ್ಲಿ ವಿಜಯ್ ಘಾಟ್‌ನಲ್ಲಿ ಒಂದು ವೆಬ್ ಸರಣಿಯನ್ನು ಚಿತ್ರೀಕರಿಸಲಾಗುತ್ತಿತ್ತು. ವೆಬ್ ಸರಣಿಯನ್ನು ಚಿತ್ರೀಕರಿಸಲು ಅನುಮತಿ ನೀಡಲಾಗಿತ್ತೇ ಹೊರತು ಆ ಪ್ರದೇಶದಲ್ಲಿ ಡ್ರೋನ್ ಬಳಕೆಗೆ ಯಾವುದೇ ಅನುಮತಿ ನೀಡಿಲ್ಲ, ಹೀಗಾಗಿ ಕೂಡಲೇ ಡ್ರೋನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 15 ಸ್ವತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವ ಕೆಂಪುಕೋಟೆ ಸುತ್ತಮುತ್ತ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಇಲ್ಲಿ ಡ್ರೋನ್ಸ್, ಪ್ಯಾರಾಗ್ಲೈಡಿಂಗ್ ಮತ್ತು ಹಾಟ್ ಏರ್ ಬಲೂನ್‌ಗಳಂತಹ ವೈಮಾನಿಕ ವಸ್ತುಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಈ ಆದೇಶವು ಆಗಸ್ಟ್ 16 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಜಾರಿಯಲ್ಲಿರುತ್ತದೆ.