ಮುಳ್ಳೇರಿಯ: ವಿದ್ಯೆಯನ್ನು ಕಲಿತು ತುಂಬಾ ಪುಸ್ತಕಗಳನ್ನು ಓದಿ ಜ್ಞಾನವಂತರಾದಾಗ ಸಮಾಜ ಗೌರವಿಸುತ್ತದೆ. ಉದ್ಯೋಗ ಲಭಿಸುತ್ತದೆ. ಆಗ ಸಮಾಜ ಗುರುತಿಸುತ್ತದೆ. ಅದರೊಂದಿಗೆ ಆಸ್ತಿ ಪಾಸ್ತಿ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ಆಸ್ತಿ-ಪಾಸ್ತಿ ನಷ್ಟವಾದರೂ ಶಾಶ್ವತವಾದ ಆಸ್ತಿ (ಜ್ಞಾನ) ಸದಾ ನಮ್ಮಲ್ಲಿರುತ್ತದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ತಿಳಿಸಿದರು.
ದುರ್ಗಾ ಹಿರಿಯ ಪ್ರೌಢ ಶಾಲೆ ಕಾಞ0ಗಾಡ್ ನ ಕನ್ನಡ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳ ಸೃಜನಶೀಲತೆಗೆ ಒತ್ತನ್ನು ನೀಡುವ 2021-22ನೇ ಶೈಕ್ಷಣಿಕ ವರ್ಷದ ಸಾಹಿತ್ಯ ಸಭೆಯನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಛಲವಿದ್ದರೆ, ಜ್ಞಾನವೆಂಬ ವಿದ್ಯಾ ಶಿಕ್ಷಣ ವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅದಕ್ಕಾಗಿ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ದೇಶದ ಮಹನೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಪೂರ್ತಿದಾಯಕ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದಿದರೆ ಮಾತ್ರ ಕಥೆ, ಕವಿತೆ, ಲೇಖನ ಇತ್ಯಾದಿಗಳನ್ನು ಬರೆಯಲು ಸಾಧ್ಯ ಎಂದು ಡಾ. ರತ್ನಾಕರ ಮಲ್ಲಮೂಲೆ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಪ್ರದೀಪ್ ಕುಮಾರ್ ಟಿ.ವಿ ವಹಿಸಿದ್ದರು. ಶಾಲಾ ಕನ್ನಡ ಮಾಧ್ಯಮ ಅಧ್ಯಾಪಕ ಸುಮಾ ಟೀಚರ್, ಹೇಮಚಂದ್ರ ಮಾಸ್ತರ್, ಸಂಧ್ಯಾ ಟೀಚರ್ ಶುಭಾಶಂಸನೆಗೈದರು.
ರಾಜೇಶ್ ಎಸ್ ಪಿ.ಮಾಸ್ತರ್ ಸ್ವಾಗತಿಸಿ, ಪ್ರಿಯಾ ಟೀಚರ್ ವಂದಿಸಿದರು. ಉಷಾ ಟೀಚರ್ ನಿರೂಪಿಸಿದರು. ವಿದ್ಯಾರ್ಥಿನಿ ಭೂಮಿಕಾ ಪ್ರಾರ್ಥನೆ ಹಾಡಿದರು. ಬಳಿಕ ಮಕ್ಕಳ ಸಾಹಿತ್ಯ ಕಾರ್ಯಕ್ರಮ ಜರಗಿತು.