ಮುಂಬೈ: 'ತಂತ್ರಜ್ಞಾನ ಕುರಿತಂತೆ ಚೀನಾದ ಮೇಲೆ ಅವಲಂಬನೆ ಹೆಚ್ಚಿದಷ್ಟೂ, ಅದರ ಮುಂದೆ ಮಂಡಿಯೂರುವುದು ಅನಿವಾರ್ಯವಾಗಲಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಎಚ್ಚರಿಸಿದರು.
75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಇಲ್ಲಿನ ಮುಂಬೈ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, 'ನಾವು ಇಂಟರ್‌ನೆಟ್ ಮತ್ತು ತಂತ್ರಜ್ಞಾನವನ್ನು ಅತಿಯಾಗಿ ಬಳಸುತ್ತಿದ್ದೇವೆ. ಆದರೆ, ಭಾರತವು ತನ್ನದೇ ಆದ ತಂತ್ರಜ್ಞಾನವನ್ನು ಹೊಂದಿಲ್ಲ. ಇದನ್ನು ಹೊರಗಿನಿಂದ ಪಡೆದಿದ್ದೇವೆ' ಎಂದರು.
'ಒಂದು ಸಮಾಜವಾಗಿ ನಾವು ಚೀನಾ ಮತ್ತು ಚೀನಿ ವಸ್ತುಗಳ ವಿರುದ್ಧ ಎಷ್ಟೇ ಆಕ್ರೋಶ ವ್ಯಕ್ತಪಡಿಸಬಹುದು. ಆದರೆ, ನಿಮ್ಮ ಮೊಬೈಲ್‌ನಲ್ಲಿರುವ ಅಷ್ಟೂ ಅಂಶಗಳು ಎಲ್ಲಿಂದ ಬರುತ್ತವೆ?' ಎಂದು ಪ್ರಶ್ನಿಸಿದರು.
'ಆರ್ಥಿಕ ಭದ್ರತೆಯು ಮುಖ್ಯವಾದುದು. ತಂತ್ರಜ್ಞಾನದ ಅಳವಡಿಕೆಯೂ ನಿಬಂಧನೆಗೆ ಒಳಪಟ್ಟಿರಬೇಕು. ಸ್ವದೇಶಿ ಎಂದರೆ ಭಾರತದ ನಿಬಂಧನೆಗಳಿಗೆ ಅನುಗುಣವಾಗಿ ಉದ್ದಿಮೆ ನಡೆಸುವುದು. ನಾವು ಸ್ವನಿರ್ಭರರಾಗಿರಬೇಕು. ನಮ್ಮದೇ ನಿಬಂಧನೆಗೆ ಅನುಗುಣವಾಗಿ ಅಂತರರಾಷ್ಟ್ರೀಯ ವ್ಯವಹಾರ ಇರಬೇಕು' ಎಂದು ಪ್ರತಿಪಾದಿಸಿದರು.
ದೇಶೀಯವಾಗಿ ಉತ್ಪಾದನೆಯಾಗುವ ವಸ್ತು ಹೊರಗಿನದ್ದನ್ನು ಆಧರಿಸಿರಬಾರದು. ಹೆಚ್ಚು ಉತ್ಪಾದನೆ ಮತ್ತು ಅತ್ಯುತ್ತಮ ಗುಣಮಟ್ಟದನ್ನು ಉತ್ಪಾದಿಸುವ ಸ್ಪರ್ಧಾತ್ಮಕತೆ ಹೊಂದುವುದೇ ಆರ್ಥಿಕತೆ ಗುರಿ ಆಗಿರಬೇಕು. ನಾವು ಅಂತರರಾಷ್ಟ್ರೀಯ ವಹಿವಾಟಿನ ವಿರುದ್ಧವಾಗಿಲ್ಲ. ಆದರೆ, ನಮ್ಮ ಉತ್ಪಾದನೆ ಗ್ರಾಮೀಣ ಭಾಗದಲ್ಲಿ ಆಗಬೇಕು. ಸಮೂಹ ಉತ್ಪಾದನೆಯಲ್ಲ, ಸಾಮೂಹಿಕ ಉತ್ಪಾದನೆ ನಮ್ಮದಾಗಿರಬೇಕು ಎಂದು ಹೇಳಿದರು.
ಉತ್ಪಾದನೆ ಪ್ರಕ್ರಿಯೆಯ ವಿಕೇಂದ್ರೀಕರಣವು ಹೆಚ್ಚಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲಿದೆ. ಉತ್ಪಾದನೆ ಹೆಚ್ಚಿದಷ್ಟು ಹೆಚ್ಚಿನವರು ಸ್ವಯಂ ನಿರ್ಭರರಾಗುತ್ತಾರೆ. ಇದೇ ಸಂದರ್ಭದಲ್ಲಿ ಆದಾಯದ ಸಮಾನ ಹಂಚಿಕೆಯೂ ಅಗತ್ಯ ಎಂದರು.
'ಸಂಶೋಧನೆ, ಅಭಿವೃದ್ಧಿ, ಸಣ್ಣ-ಅತಿಸಣ್ಣ ಉದ್ದಿಮೆಗಳ ಪ್ರಗತಿ ಹಾಗೂ ಸಹಕಾರ ಕ್ಷೇತ್ರಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ದೇಶ ಮತ್ತು ಅಭಿವೃದ್ಧಿಗೆ ಏನು ಅಗತ್ಯವೋ ಅವುಗಳನ್ನು ಉತ್ಪಾದಿಸಲು ಸರ್ಕಾರವು ನಿರ್ದೇಶನ ನೀಡಬೇಕು. ಅಲ್ಲದೆ, ಪ್ರಕೃತಿದತ್ತ ಸಂಪತ್ತಿನ ಶೋಷಣೆಯನ್ನು ತಪ್ಪಿಸಲು 'ಅನುಭೋಗ'ದ ಮೇಲಿನ ನಿಯಂತ್ರಣವೂ ಅಗತ್ಯ' ಎಂದು ಭಾಗವತ್ ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಒಟ್ಟಾರೆ ವ್ಯಕ್ತಿಯ ಜೀವನಮಟ್ಟವನ್ನು ನಿರ್ಧರಿಸಲು ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದಲ್ಲ, ಸಮಾಜಕ್ಕೆ ಮರಳಿ ನಾವು ಎಷ್ಟು ಕೊಡುತ್ತೇವೆ ಎಂಬುದೇ ಮಾನದಂಡವಾಗಬೇಕು ಎಂದು ಅಭಿಪ್ರಾಯಪಟ್ಟರು.