ನವದೆಹಲಿ: ಜುಲೈ ತಿಂಗಳ ಮೊದಲ ವಾರದ ನಂತರ ದೇಶಾದ್ಯಂತ ಮತ್ತೆ ಚುರುಕುಗೊಂಡಿದ್ದ ಮುಂಗಾರು ತಿಂಗಳಾಂತ್ಯದಲ್ಲಿ ಕ್ಷೀಣಿಸಿದೆ. ಈ ಬಾರಿ ಮುಂಗಾರಿನಲ್ಲಿ ಸುಮಾರು 9.8% ಮಳೆ ಕೊರತೆಯಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರೊಂದಿಗೆ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳ ಮಳೆ ಅಂದಾಜು ತೆಗೆದುಕೊಂಡರೆ, ಈ ತಿಂಗಳು ಮಳೆ ಸಾಮಾನ್ಯಕ್ಕಿಂತ ಸ್ವಲ್ಪ ಅಧಿಕವಿರಲಿದೆ. ಸೆಪ್ಟೆಂಬರ್‌ನಲ್ಲಿಯೂ ಹೆಚ್ಚಿನ ಮಳೆ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರಾ ತಿಳಿಸಿದ್ದಾರೆ.
ದೇಶದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಸಾಮಾನ್ಯ ಹಾಗೂ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳಬಹುದಾಗಿದೆ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ ಭಾನುವಾರ ಅತಿ ಹೆಚ್ಚಿನ ಮಳೆಯಾಗಿದ್ದು, ಪ್ರವಾಹದಂಥ ಸ್ಥಿತಿ ಏರ್ಪಟ್ಟಿದೆ. ಈ ಬೆನ್ನಲ್ಲೇ ಮುನ್ಸೂಚನೆ ನೀಡಲಾಗಿದೆ. ಮುಂದೆ ಓದಿ...
ಆಗಸ್ಟ್‌ನಲ್ಲಿ ಮತ್ತೆ ಚುರುಕುಪಡೆಯುವ ಮುಂಗಾರು
ಆಗಸ್ಟ್ ಮೊದಲಲ್ಲಿ ಮುಂಗಾರು ಕ್ಷೀಣಗೊಳ್ಳುತ್ತದೆ. ನಂತರ ಕೆಲವೇ ದಿನಗಳಲ್ಲಿ ಮತ್ತೆ ಚುರುಕುಗೊಳ್ಳಲಿದೆ. ಇದರಿಂದ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಉತ್ತರ ಭಾಗ, ಛತ್ತೀಸ್‌ಗಡ ಹೊರತುಪಡಿಸಿ ಉಳಿದೆಡೆ ಹೆಚ್ಚಿನ ಮಳೆಯಾಗಬಹುದು ಎಂದು ದಕ್ಷಿಣ ಕೊರಿಯಾ ಮೂಲದ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆ
ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಬಿಹಾರದಲ್ಲಿ ಮತ್ತೆ ಮಳೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಶ್ಚಿಮ ಭಾಗಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಕ್ಷೀಣಿಸಿದ ಮಳೆ ಪ್ರಮಾಣ
ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ದೇಶ ಜುಲೈ ತಿಂಗಳಿನಲ್ಲಿ ಸಾಮಾನ್ಯ ಮಳೆ ಪಡೆದಿದ್ದು, 101% ರಷ್ಟು ಮಳೆ ಪ್ರಮಾಣ ದಾಖಲಾಗಿದೆ. ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ 12% ಹೆಚ್ಚಿನ ಮಳೆ ದಾಖಲಾಗಿದೆ. ವಾಯವ್ಯ ಭಾರತದಲ್ಲಿ 19% ಮಳೆ ಕೊರತೆ, ಮಧ್ಯ ಭಾರತದಲ್ಲಿ 3% ಮಳೆ ಕೊರತೆ ಉಂಟಾಗಿದೆ ಎಂದು ಮಾಹಿತಿ ನೀಡಿದೆ. ಆಗಸ್ಟ್‌ನಲ್ಲಿ ಕೂಡ 97% ಮಳೆ ಪ್ರಮಾಣ ದಾಖಲಾಗಲಿದೆ ಎಂದು ತಿಳಿಸಿದೆ.
ಕೆಲವು ರಾಜ್ಯಗಳಲ್ಲಿ ಮಳೆಯಾಗಿದ್ದರೂ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆ
ಜೂನ್ ತಿಂಗಳಿನಲ್ಲಿ ದೇಶದಲ್ಲಿ 17.6% ಹೆಚ್ಚಿನ ಮಳೆ ದಾಖಲಾಗಿತ್ತು. ಜುಲೈನಲ್ಲಿ 9.8% ಮಳೆ ಕೊರತೆ ಉಂಟಾಗಿದೆ. ದೆಹಲಿ, ಮಹಾರಾಷ್ಟ್ರ, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾದಂಥ ಕೆಲವು ರಾಜ್ಯಗಳಲ್ಲಿ ಮಳೆ ಆರ್ಭಟಿಸಿದ್ದರೂ ಒಟ್ಟಾರೆ ಮಳೆ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ. ಮುಂದಿನ ಎರಡು ತಿಂಗಳು ಮಳೆ ಮುಂದುವರೆಯಲಿದ್ದು, ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಪ್ರಮಾಣ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ಜೂನ್ 4ರಂದು ಕೇರಳ ಮೂಲಕ ಮುಂಗಾರು ಪ್ರವೇಶಿಸಿದ್ದು, ಜೂನ್ 19ರ ನಂತರ ಕ್ಷೀಣಿಸಿತ್ತು. ಆನಂತರ ಎಲ್ಲೆಡೆ ಮಳೆ ತಗ್ಗಿತ್ತು. ಜುಲೈ ಮೊದಲ ವಾರದ ನಂತರ ಮತ್ತೆ ಮುಂಗಾರು ಚುರುಕುಗೊಂಡು ಹಲವೆಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿತ್ತು.