ವಾಷಿಂಗ್ಟನ್: ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಭಿವೃದ್ಧಿಗೊಂಡಿರುವ ಕೊರೊನಾ ಲಸಿಕೆಗಳ ಸಮಾನ ವಿತರಣೆಗೆ ಆದ್ಯತೆ ನೀಡಲು ಇನ್ನಷ್ಟು ದಿನ ಬೂಸ್ಟರ್ ಡೋಸ್‌ಗಳಿಗೆ ತಡೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಕರೆ ನೀಡಿದೆ.
ಶ್ರೀಮಂತ ಹಾಗೂ ಬಡ ರಾಷ್ಟ್ರಗಳ ನಡುವೆ ಕೊರೊನಾ ಲಸಿಕೆ ವಿತರಣೆಯಲ್ಲಿನ ತೀವ್ರ ಅಸಮಾನತೆಯನ್ನು ಪರಿಹರಿಸಲು ಕನಿಷ್ಠ ಸೆಪ್ಟೆಂಬರ್ ಅಂತ್ಯದವರೆಗೆ ಕೊರೊನಾ ಬೂಸ್ಟರ್ ಲಸಿಕೆಗಳಿಗೆ ತಡೆ ನೀಡುವಂತೆ ಕೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅದನಾಮ್ ಗೆಬ್ರಿಯೇಸುಸ್, ಹಲವು ದೇಶಗಳಿಗೆ ಹಾಗೂ ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಲಸಿಕಾ ಗುರಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ತಿಳಿಸಿದ್ದು, ಬಡ ರಾಷ್ಟ್ರಗಳಿಗೆ ಹೆಚ್ಚಿನ ಲಸಿಕೆ ನೀಡುವಂತೆ ಕೇಳಿದ್ದಾರೆ.
"ಡೆಲ್ಟಾ ರೂಪಾಂತರದಿಂದ ತಮ್ಮ ಜನರನ್ನು ರಕ್ಷಿಸಲು ಎಲ್ಲಾ ಸರ್ಕಾರಗಳ ಕಾಳಜಿ ನಮಗೆ ಅರ್ಥವಾಗುತ್ತದೆ. ಆದರೆ ಈಗಾಗಲೇ ಅಧಿಕ ಮಟ್ಟದಲ್ಲಿ ಜಾಗತಿಕ ಲಸಿಕೆಗಳನ್ನು ಬಳಸಿದ ದೇಶಗಳು ಇನ್ನಷ್ಟು ಲಸಿಕೆಗಳನ್ನು ಹೆಚ್ಚಾಗಿ ಬಳಸುವುದು ಸದ್ಯಕ್ಕೆ ಸಾಧ್ಯವಿಲ್ಲ. ವಿಶ್ವದಲ್ಲಿ ಅತ್ಯಂತ ದುರ್ಬಲ ರಾಷ್ಟ್ರಗಳ ಜನರು ಅಸುರಕ್ಷಿತವಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ" ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಶ್ರೀಮಂತ ಹಾಗೂ ಹೆಚ್ಚಿನ ಆದಾಯದ ದೇಶಗಳಿಗೆ ಹೆಚ್ಚಿನ ಕೊರೊನಾ ಲಸಿಕೆ ಪೂರೈಸುವ ಬದಲು ಸದ್ಯಕ್ಕೆ ಕಡಿಮೆ ಆದಾಯದ ಬಡ ರಾಷ್ಟ್ರಗಳಿಗೆ ಹೆಚ್ಚಿನ ಲಸಿಕೆಗಳನ್ನು ಪೂರೈಸಬೇಕಾದ ಅಗತ್ಯವಿದೆ. ತುರ್ತಾಗಿ ಈ ಕಾರ್ಯವನ್ನು ನಡೆಸಬೇಕಿದೆ" ಎಂದು ಹೇಳಿದರು.
ಎಎಫ್‌ಪಿ ಎಣಿಕೆ ಪ್ರಕಾರ, ಕೊರೊನಾ ಲಸಿಕೆಗಳ 4.25 ಶತಕೋಟಿ ಡೋಸ್‌ಗಳನ್ನು ಜಾಗತಿಕವಾಗಿ ನೀಡಲಾಗಿದೆ. ವಿಶ್ವ ಬ್ಯಾಂಕ್‌ನಿಂದ ಹೆಚ್ಚಿನ ಆದಾಯ ಹೊಂದಿರುವ ದೇಶಗಳಾಗಿ ವರ್ಗೀಕರಿಸಲಾದ ದೇಶಗಳಲ್ಲಿ 100 ಜನರಿಗೆ 101 ಡೋಸ್‌ನಂತೆ ಲಸಿಕೆ ವಿರತಣೆ ಮಾಡಲಾಗಿದೆ. ಕಡಿಮೆ ಆದಾಯ ಹೊಂದಿರುವ 29 ದೇಶಗಳಲ್ಲಿ 100 ಜನರಿಗೆ 1.7 ಡೋಸ್‌ಗಳ ಅಂತರವಿದೆ.
ಹೀಗಾಗಿ ಕನಿಷ್ಠ ಸೆಪ್ಟೆಂಬರ್ ಅಂತ್ಯದವರೆಗೆ ಬೂಸ್ಟರ್ ಡೋಸ್‌ಗಳಿಗೆ ತಡೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಈ ನಿರ್ಧಾರ ಪ್ರತಿ ದೇಶದ ಜನಸಂಖ್ಯೆಯ ಕನಿಷ್ಠ 10% ಜನರಿಗೆ ಲಸಿಕೆ ಹಾಕಲು ಅನುವು ಮಾಡಿಕೊಡುತ್ತದೆ ಎಂದು ಟೆಡ್ರೋಸ್ ಹೇಳಿದ್ದಾರೆ.
"ಆದರೆ ಇದು ಸಾಧ್ಯವಾಗಬೇಕಾದರೆ ನಮಗೆ ಎಲ್ಲರ ಸಹಕಾರ ಬೇಕು. ಜಾಗತಿಕ ಲಸಿಕೆಗಳ ಪೂರೈಕೆಯನ್ನು ಮಾಡುತ್ತಿರುವ ಬೆರಳೆಣಿಕೆಯಷ್ಟು ದೇಶಗಳು ಹಾಗೂ ಕಂಪನಿಗಳ ಸಹಕಾರ ವಿಶೇಷವಾಗಿ ಬೇಕಿದೆ. ಕೊರೊನಾ ಲಸಿಕೆಗಳ ಅತಿ ದೊಡ್ಡ ಉತ್ಪಾದಕರು, ಗ್ರಾಹಕರು ಹಾಗೂ ದಾನಿಗಳಾಗಿರುವುದರಿಂದ ಜಿ 20 ಸದಸ್ಯ ರಾಷ್ಟ್ರಗಳಿಗೆ ಈ ವಿಷಯದಲ್ಲಿ ಪ್ರಮುಖ ನಾಯಕತ್ವದ ಪಾತ್ರವಿದೆ" ಎಂದು ಹೇಳಿದರು.
ಆದರೆ ಕೊರೊನಾ ಬೂಸ್ಟರ್ ಶಾಟ್‌ಗಳಿಗೆ ತಡೆ ನೀಡುವ ಯುಎನ್ ಆರೋಗ್ಯ ಏಜನ್ಸಿ ಮನವಿಯನ್ನು ಅಮೆರಿಕ ತಿರಸ್ಕರಿಸಿದೆ. ಈ ಆಯ್ಕೆಯನ್ನು ನಾವು ಅನುಸರಿಸುವುದಿಲ್ಲ. ನಾವು ಬೂಸ್ಟರ್ ಡೋಸ್‌ಗಳನ್ನೂ ನೀಡುತ್ತೇವೆ. ಬಡ ರಾಷ್ಟ್ರಗಳಿಗೆ ಲಸಿಕೆಯನ್ನೂ ಪೂರೈಸುತ್ತೇವೆ. ಈ ಎರಡೂ ಆಯ್ಕೆಗಳನ್ನು ಪೂರೈಸುತ್ತೇವೆ ಎಂದಿದ್ದು, ಬೇರೆ ಶ್ರೀಮಂತ ರಾಷ್ಟ್ರಗಳು ಕೂಡ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದೆ.
ಕೊರೊನಾ ಮೂರನೇ ಅಲೆ ನಿರ್ವಹಣೆಗೆ ಸಿದ್ಧತೆಗಳು ಸಾಗುತ್ತಿರುವ ಈ ಸಂದರ್ಭ, ಮೂರನೇ ಡೋಸ್, ಅಂದರೆ "ಬೂಸ್ಟರ್ ಶಾಟ್" ಲಸಿಕೆ ಪಡೆಯುವ ಅಗತ್ಯದ ಕುರಿತೂ ಚರ್ಚೆ ನಡೆಯುತ್ತಿದ್ದು, ಹಲವು ದೇಶಗಳಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡಲು ಆರಂಭಿಸಿವೆ.