ಯುರೋಪ್ ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯುರೋಪ್ ದೇಶಗಳಲ್ಲಿ ಡಿಸೆಂಬರ್ ವೇಳೆಗೆ 2,36,000ಗೂ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಬಹುದು ಎಂದು ಎಚ್ಚರಿಕೆ ನೀಡಿದೆ.
ಇದೇ ಸಮಯ, ತಗ್ಗಿರುವ ಲಸಿಕಾ ವೇಗದ ಕುರಿತು ಎಚ್ಚರಿಕೆ ಗಂಟೆ ಬಾರಿಸಿದೆ.
ಕೊರೊನಾ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ 4.5 ಮಿಲಿಯನ್ ಮಂದಿ ಸಾವನ್ನಪ್ಪಿದ್ದು, ಈ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ರವಾನಿಸಿದೆ.
ಸೋಂಕು ಹರಡುವಿಕೆ ಪ್ರಮಾಣ ಜಾಗತಿಕವಾಗಿ ಮತ್ತೆ ಹೆಚ್ಚುತ್ತಿದೆ. ಡೆಲ್ಟಾ ರೂಪಾಂತರವು ಇನ್ನಷ್ಟು ವೇಗಿಯಾಗಿರುವ ಕಾರಣ ಹೆಚ್ಚೆಚ್ಚು ಪಸರಿಸುತ್ತಿದೆ. ಅದರಲ್ಲೂ ಲಸಿಕೆ ಪಡೆದುಕೊಳ್ಳದವರಲ್ಲಿ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ ಎಂದು ತಿಳಿಸಿದೆ.
ಇದೇ ವೇಳೆ, ದಕ್ಷಿಣ ಆಫ್ರಿಕಾದಲ್ಲಿ ವಿಜ್ಞಾನಿಗಳು ಹೊಸ ರೂಪಾಂತರವನ್ನು ಪತ್ತೆ ಹಚ್ಚಿದ್ದು, ಇದು ಅಸಾಮಾನ್ಯ ವೇಗಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಸಸ್ ಮತ್ತು ಕ್ವಾಜುಲು-ನಟಲ್ ರಿಸರ್ಚ್ ಇನೋವೇಷನ್ ಆಫ್ ಸೀಕ್ವೆನ್ಸಿಂಗ್ ಪ್ಲಾಟ್ ಫಾರ್ಮ್ ತಜ್ಞರು ಕೊವಿಡ್-19 ರೂಪಾಂತರದ ಬಗ್ಗೆ ಎಚ್ಚರಿಸಿದ್ದಾರೆ. ಕಾಳಜಿಯ ರೂಪಾಂತರ ವೈರಸ್ ಆಗಿರುವ C.1.2 ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ವರದಿಯಾಗಿದೆ ಎಂದಿದ್ದಾರೆ.
ಕೊರೊನಾವೈರಸ್ ಸೋಂಕಿನ C.1.2 ರೂಪಾಂತರ ತಳಿಯು ದಕ್ಷಿಣ ಆಫ್ರಿಕಾದ ಮಟ್ಟಿಗೆ ಸೀಮಿತವಾಗಿಲ್ಲ. ಹಲವು ರಾಷ್ಟ್ರಗಳಿಗೆ ಹೊಸ ರೂಪಾಂತರ ವೈರಸ್ ಹರಡಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ತಿಂಗಳು C.1.2 ರೂಪಾಂತರ ತಳಿಯ ಸೋಂಕು ಅಂಟಿಕೊಂಡವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. 0.2ರಷ್ಟಿದ್ದ ರೂಪಾಂತರ ಸೋಂಕಿತ ಪ್ರಕರಣಗಳ ಪ್ರಮಾಣವು ಜೂನ್ ತಿಂಗಳಿನಲ್ಲಿ 1.6ರಷ್ಟಾಗಿದ್ದು, ಅದು ಜುಲೈ ವೇಳೆಗೆ ಶೇ.2ರಷ್ಟು ಏರಿಕೆಯಾಗಿತ್ತು. "ದೇಶದಲ್ಲಿ ಇದೇ ಮೊದಲು ಪತ್ತೆ ಆಗಿರುವ ಬೀಟಾ ಮತ್ತು ಡೆಲ್ಟಾ ರೂಪಾಂತರಗಳಂತೆ ಈ ರೋಗಾಣು ಪ್ರಮಾಣ ಹೆಚ್ಚಳವಾಗಲಿದೆ," ಎಂದು ಹೇಳಿದೆ.
ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಅಮೆರಿಕನ್ನರ ಮೇಲೆ ಪ್ರಯಾಣ ನಿರ್ಬಂಧಗಳನ್ನು ಮರುಹೇರಿಕೆ ಮಾಡಲು ಶಿಫಾರಸು ಮಾಡಿದೆ. ಅಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧ ಹೇರುವುದು ಸೂಕ್ತ ಎಂದು ಸಲಹೆ ನೀಡಿದೆ.
ಇಸ್ರೇಲ್, ಕೊಸೊವೊ, ಲೆಬನಾನ್, ಮಾಂಟೆನೆಗ್ರೊ, ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ ಹಾಗೂ ಅಮೆರಿಕಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಯುರೋಪಿಯನ್ ಕೌನ್ಸಿಲ್ ತಿಳಿಸಿದೆ.
ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ಇದಕ್ಕೆ ಕಾರಣವಾಗಿದೆ ಹಾಗೂ ಹೆಚ್ಚಿನ ಜನರು ಲಸಿಕೆ ಪಡೆದುಕೊಳ್ಳಲು ನಿರಾಕರಿಸಿರುವುದು ಕಂಡುಬಂದಿದೆ.
ಸೋಮವಾರ ಯುರೋಪ್ ದೇಶಗಳಲ್ಲಿನ ಕೊರೊನಾ ಏರಿಕೆ ಸಂಬಂಧ ಡಬ್ಲುಎಚ್‌ಒ ಯುರೋಪ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದರು. ಯುರೋಪ್‌ನಲ್ಲಿ ಸೋಂಕಿನ ಪ್ರಮಾಣ ಹಾಗೂ ಮರಣ ಪ್ರಮಾಣ ಏರಿಕೆಯಾಗುತ್ತಿದೆ. ಅದರಲ್ಲೂ ಬಲ್ಕಾನ್ಸ್, ಕೌಕಾಸಸ್ ಹಾಗೂ ಮಧ್ಯ ಏಷ್ಯಾದಂಥ ಬಡ ರಾಷ್ಟ್ರಗಳಲ್ಲಿ ಈ ಪ್ರಮಾಣ ಹೆಚ್ಚಿದೆ ಎಂದು ಹೇಳಿದ್ದರು.
ಕಳೆದ ವಾರ ಈ ಪ್ರದೇಶಗಳಲ್ಲಿ 11% ಮರಣ ಪ್ರಮಾಣ ಏರಿಕೆಯಾಗಿದೆ. ಡಿಸೆಂಬರ್ 1ರ ವೇಳೆಗೆ ಯುರೋಪ್‌ನಲ್ಲಿ 236000 ಮಂದಿ ಸಾವನ್ನಪ್ಪುವ ಅಂದಾಜಿದೆ ಎಂದು ಡಬ್ಲುಎಚ್‌ಒ ಯುರೋಪ್ ಮುಖ್ಯಸ್ಥ ಹಾನ್ಸ್ ಕ್ಲೂಗ್ ತಿಳಿಸಿದ್ದರು.
ಯುರೋಪ್‌ನಲ್ಲಿ ಇಲ್ಲಿಯವರೆಗೂ 1.3 ಮಿಲಿಯನ್ ಮಂದಿ ಸಾವನ್ನಪ್ಪಿರುವುದು ದಾಖಲಾಗಿದೆ. ನಿರ್ಬಂಧಗಳು ಹಾಗೂ ಕೊರೊನಾ ಕ್ರಮಗಳ ಉತ್ಪ್ರೇಕ್ಷಿತ ಸಡಿಲಗೊಳಿಸುವಿಕೆ ಹಾಗೂ ಪ್ರಯಾಣದ ಜೊತೆ ಡೆಲ್ಟಾ ರೂಪಾಂತರ ಭಾಗಶಃ ಕಾರಣವಾಗಿದೆ ಎಂದು ಹೇಳಿದರು.