ನವದೆಹಲಿ: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಕಳೆದ 10 ದಿನದಲ್ಲಿ 'ನಿಗೂಢ ಜ್ವರ'ದಿಂದ 30 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಫಿರೋಜಾಬಾದ್‌ಗೆ ಒಂದು ತಜ್ಞರ ತಂಡವನ್ನು ಕಳುಹಿಸಿದೆ.
ಫಿರೋಜಾಬಾದ್ ಜಿಲ್ಲೆಯು ಪ್ರಸ್ತುತ ಈ ರೋಗವನ್ನು ಜ್ವರ, ದೇಹದ ನೋವು, ತಲೆನೋವು, ನಿರ್ಜಲೀಕರಣ, ಪ್ಲೇಟ್ಲೆಟ್ ಎಣಿಕೆಯಲ್ಲಿ ಕ್ಷಿಪ್ರ ಇಳಿಕೆ, ಹೊಟ್ಟೆ ನೋವು ಮತ್ತು ಕೆಲವು ಸಂದರ್ಭಗಳಲ್ಲಿ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರ ಎಂದು ಪರಿಗಣಿಸುತ್ತಿದೆ.
ಗುರುತಿಸಲಾಗದ ಕಾಯಿಲೆಯಿಂದ ಸಾವನ್ನಪ್ಪಿದ ಕೆಲವು ಮಕ್ಕಳು ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ. ಆದರೆ ಯಾವುದೇ ಮಕ್ಕಳಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ ಎಂದು ವರದಿಯಾಗಿದೆ.
ಕೆಲವು ಪ್ರಕರಣಗಳು ಮತ್ತು ಕೆಲವು ಸಾವುಗಳು ಪಕ್ಕದ ಜಿಲ್ಲೆಗಳಿಂದ ವರದಿಯಾಗಿವೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಏಕಾಏಕಿ ಕಾಣಿಸಿಕೊಂಡಿರುವ ಈ ನಿಗೂಢ ಜ್ವರ ಫಿರೋಜಾಬಾದ್ ಜಿಲ್ಲೆಯ ಹಲವಾರು ಗ್ರಾಮಗಳ ಮೇಲೆ ಪರಿಣಾಮ ಬೀರಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ಮತ್ತು ಸಾವನ್ನಪ್ಪಿದವರ ಮಾದರಿಗಳನ್ನು ಲಖನೌ ಮತ್ತು ಐಸಿಎಂಆರ್ ಅಡಿಯಲ್ಲಿ ಬರುವ ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಹೆಚ್ಚಿನ ತನಿಖೆಗಾಗಿ ಕಳುಹಿಸಲಾಗಿದೆ. ಕೆಲವು ವೈದ್ಯರು ಇದು ಡೆಂಗ್ಯೂನ ಹೊಸ ತಳಿ ಆಗಿರಬಹುದು ಎಂದು ಊಹಿಸುತ್ತಿದ್ದಾರೆ.