ತಿರುವನಂತಪುರಂ: ''ನಿಪಾ ವೈರಸ್‌ನಿಂದ ಸಾವನ್ನಪ್ಪಿದ ಹನ್ನೆರಡು ವರ್ಷದ ಬಾಲಕನ ಸಂಪರ್ಕಕ್ಕೆ ಬಂದಿದ್ದ 10 ಮಂದಿಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ಮಾದರಿ ನೆಗೆಟಿವ್ ಆಗಿದೆ," ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ನಿಪಾ ವೈರಸ್‌ನಿಂದ ಸಾವನ್ನಪ್ಪಿದ್ದ ಬಾಲಕನ ಸಂಪರ್ಕಿತರ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿತ್ತು. ಈ ಮಾದರಿಯ ವರದಿಯ ಬಗ್ಗೆ ಮಾಹಿತಿ ನೀಡಿರುವ ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, "ಎಲ್ಲಾ 10 ಸಂಪರ್ಕಿತರ ಮಾದರಿಯನ್ನು ನಿಪಾ ವೈರಸ್ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಇದರಿಂದಾಗಿ ಒಂದು ನೆಮ್ಮದಿ ದೊರೆತಿದೆ," ಎಂದು ಹೇಳಿದ್ದಾರೆ.
ಇನ್ನು ಕೆಲವು ಮಾದರಿಗಳನ್ನು ಕೋಝಿಕೋಡ್‌ನ ಮೆಡಿಕಲ್ ಕಾಲೇಜು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಎನ್‌ಐವಿಯ ಅಡಿಯಲ್ಲಿ ಬರುತ್ತದೆ. ಭೋಪಾಲ್ ಮೂಲದ ಎನ್‌ಐವಿ ತಂಡವು ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದು ಮಾದರಿಯನ್ನು ಸಂಗ್ರಹಿಸಿತ್ತು ಎಂದು ಹೇಳಲಾಗಿದೆ. ನಿಫಾ ವೈರಸ್ ಸೋಂಕಿತ ಬಾಲಕು ಮತ್ತೆ ಯಾರೊಂದಿಗೆ ಸಂಪರ್ಕದಲ್ಲಿದ್ದನು ಎಂಬುದನ್ನು ಪತ್ತೆ ಮಾಡುವುದರ ಜೊತೆಗೆೆ ಮಂಗಳವಾರದಿಂದ ಮನೆ ಮನೆಗೆ ತೆರಳಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದರು.
ಈ ಹಿಂದೆ "ನಿಪಾ ವೈರಸ್ ಸೋಂಕಿತನೊಂದಿಗೆ ಸಂಪರ್ಕವನ್ನು ಹೊಂದಿದ್ದ 251 ಮಂದಿಯ ಪಟ್ಟಿಯನ್ನು ಮಾಡಿಲಾಗಿತ್ತು. ಈ ಪೈಕಿ 125 ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿ ಸೇರಿದ್ದಾರೆ. ಈ ಪೈಕಿ 54 ಮಂದಿ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆ ಪೈಕಿ ಮೂವತ್ತು ಮಂದಿ ವೈದ್ಯಕೀಯ ಸಿಬ್ಬಂದಿಯೇ ಆಗಿದ್ದಾರೆ. 38 ಮಂದಿ ನಿಪಾ ವೈರಸ್ ಸೋಂಕಿತರನ್ನು ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ,'' ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದರು.
"48 ಮಂದಿ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದವರನ್ನು ಕೋಝಿಕೋಡ್‌ನ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಲಾಗಿತ್ತು. ಈ ಪೈಕಿ 31 ಮಂದಿ ಕೋಝಿಕೋಡ್. ನಾಲ್ವರು ವಯನಾಡು, ಎಂಟು ಮಂದಿ ಮಲಪ್ಪುರಂ ಹಾಗೂ ಒಬ್ಬರು ಪಾಲಕ್ಕಾಡ್‌ನವರು ಆಗಿದ್ದಾರೆ. ಇವೆರೆಲ್ಲರ ಮಾದರಿ ಪರೀಕ್ಷೆಯ ವರದಿಯು ಇದು ಲಭಿಸುವ ಸಾಧ್ಯತೆ ಇದೆ," ಆರೋಗ್ಯ ಸಚಿವೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್‌ನ ತಂಡವು ಕೇರಳದಲ್ಲಿದೆ. ಈ ತಂಡವು ಕೇರಳದ ಆರೋಗ್ಯ ಇಲಾಖೆಗೆ ಅಗತ್ಯ ಸಹಾಯವನ್ನು ಮಾಡುತ್ತಿದೆ. ಭಾರತದಲ್ಲಿ 2018 ರಲ್ಲಿ ಮೊದಲ ಬಾರಿಗೆ ನಿಪಾ ವೈರಸ್ ಕಾಣಿಸಿಕೊಂಡಿತ್ತು. ಕೇರಳದ ಕೋಯಿಕೋಡ್‌ನಲ್ಲೇ ಈ ವೈರಸ್ ಕಂಡು ಬಂದಿತ್ತು.
ನಿಪಾ ವೈರಸ್ ಮುಖ್ಯವಾಗಿ ಪ್ರಾಣಿಗಳಿಗೆ ಮನುಷ್ಯನಿಗೆ ಹರಡುತ್ತದೆ. ಬಾವಲಿ ಅಥವಾ ಹಂದಿಯಿಂದ ಮನುಷ್ಯರಿಗೆ ಹರಡುವ ಈ ನಿಪಾ ವೈರಸ್, ಮಾನವನಿಂದ ಮಾನವನಿಗೆ ಹರಡುತ್ತದೆ. ಮುಖ್ಯವಾಗಿ ಬಾವಲಿಯಿಂದ ಈ ನಿಪಾ ವೈರಸ್ ಹರಡುತ್ತದೆ," ಎಂದು ನಿಪಾ ವೈರಸ್ ಮಾಹಿತಿ ಮೂಲದ ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್ ಹೇಳುತ್ತದೆ. ಇನ್ನು ಈ ನಿಪಾ ವೈರಸ್‌ಗೆ ನಿಗದಿತವಾದ ಯಾವುದೇ ಔಷಧಿಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಮಾನವನಿಗೆ ಆಗಲಿ ಪ್ರಾಣಿಗಳಿಗೆ ಆಗಲಿ ಯಾವುದೇ ಔಷಧಿ ಅಥವಾ ಲಸಿಕೆಯು ಇಲ್ಲ. ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುವುದು ಮಾತ್ರ ಈ ವೈರಸ್‌ಗೆ ಒಳಗಾದವರಿಗೆ ನೀಡುವ ಪ್ರಾಥಮಿಕ ಚಿಕಿತ್ಸೆಯಾಗಿದೆ. ಇನ್ನು ಕೇರಳದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಈ ನಡುವೆ ಈಗ ನಿಪಾ ವೈರಸ್ ಕೂಡಾ ಕಾಣಿಸಿಕೊಂಡಿದೆ.