HEALTH TIPS

ಸಂಕಷ್ಟದ ಸಂಕೇತ: ಜುಲೈವರೆಗಿನ 12 ತಿಂಗಳುಗಳಲ್ಲಿ ಚಿನ್ನದ ಸಾಲಗಳಲ್ಲಿ ಶೇ.77ರಷ್ಟು ಏರಿಕೆ

              ನವದೆಹಲಿ :ಕಳೆದ 12 ತಿಂಗಳುಗಳಲ್ಲಿ ದೇಶದ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಂದ ಸಾಲದ ಬೇಡಿಕೆ ಕಡಿಮೆಯಾಗಿದೆ, ಆದರೆ ಚಿನ್ನದ ಮೇಲಿನ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಮೂಲಕ ಚಿಲ್ಲರೆ ಸಾಲಗಳಲ್ಲಿ ಗಮನಾರ್ಹ ಏರಿಕೆಯಾಗಿದೆ. ಒಟ್ಟು ಬ್ಯಾಂಕ್ ಸಾಲಗಳ ಪೈಕಿ ಶೇ.26ರಷ್ಟಿರುವ ಚಿಲ್ಲರೆ ಅಥವಾ ವೈಯಕ್ತಿಕ ಸಾಲಗಳ ಮೊತ್ತ ಕಳೆದ ಜುಲೈ ತಿಂಗಳವರೆಗಿನ 12 ತಿಂಗಳ ಅವಧಿಯಲ್ಲಿ ಶೇ.11.2ರಷ್ಟು ಏರಿಕೆಯಾಗಿದೆ. ಇದಕ್ಕೂ ಹಿಂದಿನ 12 ತಿಂಗಳ ಅವಧಿಯಲ್ಲಿ ಈ ಏರಿಕೆ ಶೇ.9ರಷ್ಟಿತ್ತು ಎಂದು indianexpress.com ವರದಿ ಮಾಡಿದೆ.

           ಚಿಲ್ಲರೆ ಸಾಲಗಳ ಪೈಕಿ ಬಾಕಿಯಿರುವ ಚಿನ್ನದ ಮೇಲಿನ ಸಾಲಗಳ ಮೊತ್ತ ವಾರ್ಷಿಕ ಆಧಾರದ ಮೇಲೆ 2021, ಜುಲೈ ವೇಳೆಗೆ ಶೇ.77.4ರಷ್ಟು ಅಥವಾ 27,223 ಕೋ.ರೂ.ಗಳಷ್ಟು ಏರಿಕೆಯಾಗಿದ್ದು, 62,412 ಕೋ.ರೂ.ಗೆ ತಲುಪಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ 2021 ಜೂನ್ ಗೆ ಇದ್ದಂತೆ ಚಿನ್ನದ ಸಾಲಗಳಲ್ಲಿ ಶೇ.338.76 ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಬ್ಯಾಂಕಿನ ಒಟ್ಟು ಚಿನ್ನದ ಸಾಲಗಳ ಮೊತ್ತ 21,293 ಕೋ.ರೂ.ಗಳಾಗಿವೆ ಎಂದು ಬ್ಯಾಂಕಿನ ಅಧಿಕಾರಿಯೋರ್ವರು ತಿಳಿಸಿದ್ದಾರೆ.

            ಆದರೆ ಚಿನ್ನದ ಸಾಲಗಳ ವ್ಯವಹಾರದಲ್ಲಿ ಇಷ್ಟೊಂದು ಭಾರೀ ಏರಿಕೆಯು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟದ ಸೂಚಕವೂ ಆಗಿದೆ. ರಾಷ್ಟ್ರಮಟ್ಟದಲ್ಲಿ ಲಾಕ್ಡೌನ್, ಉದ್ಯೋಗ ನಷ್ಟ, ವೇತನಗಳಲ್ಲಿ ಕಡಿತ ಮತ್ತು ಹೆಚ್ಚಿನ ವೈದ್ಯಕೀಯ ವೆಚ್ಚಗಳು ಜನರನ್ನು ಬವಣೆಗೆ ತಳ್ಳಿವೆ. 'ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವುದು ಜನರ ಪಾಲಿಗೆ ಸುಲಭವಾಗಿದೆ. ಚಿನ್ನದ ಸಾಲಗಳ ವ್ಯವಹಾರದಲ್ಲಿ ಮರುವಸೂಲಿ ಕಷ್ಟದ ಕೆಲಸವಲ್ಲ, ಹೀಗಾಗಿ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಲು ಬ್ಯಾಂಕುಗಳು ಚಿನ್ನದ ಮೇಲೆ ಸಾಲ ನೀಡಿಕೆಯನ್ನು ಹೆಚ್ಚಿಸಿವೆ' ಎಂದು ಹೆಸರು ಹೇಳಿಕೊಳ್ಳಲು ಬಯಸದ ಸರಕಾರಿ ಬ್ಯಾಂಕೊಂದರ ಅಧಿಕಾರಿಯೋರ್ವರು ತಿಳಿಸಿದರು.

          2021, ಜುಲೈವರೆಗಿನ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಗಳ ಬಾಕಿಯೂ ಶೇ.9.8ರಷ್ಟು ಅಥವಾ 10,000 ಕೋ.ರೂ.ಗಳಷ್ಟು ಏರಿಕೆಯಾಗಿ 1.11 ಲ.ಕೋ.ರೂ.ಗೆ ತಲುಪಿದೆ. ಇದು ವಿವೇಚನಾತ್ಮಕ ವೆಚ್ಚಗಳು ಮತ್ತೆ ಹೆಚ್ಚತೊಡಗಿವೆ ಎನ್ನುವುದನ್ನು ಸೂಚಿಸುತ್ತದೆಯಾದರೂ ಗ್ರಾಹಕರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಬಡ್ಡಿದರದ ಸಾಲಗಳ ಮೊರೆ ಹೋಗುತ್ತಿದ್ದಾರೆ ಎನ್ನುವುದನ್ನೂ ಬೆಟ್ಟು ಮಾಡುತ್ತಿದೆ. ಜುಲೈ 2020ಕ್ಕೆ ಅಂತ್ಯಗೊಂಡಿದ್ದ ಹಿಂದಿನ 12 ತಿಂಗಳುಗಳ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಬಾಕಿಗಳ ಮೊತ್ತ ಶೇ.8.6ರಷ್ಟು ಏರಿಕೆಯಾಗಿತ್ತು.

                ಇತ್ತೀಚಿನ ಆರ್ಬಿಐ ವರದಿಯಂತೆ ಚಿಲ್ಲರೆ ಕ್ಷೇತ್ರದ ಸಾಲಬಾಕಿಯು 2021, ಜುಲೈಗೆ ಇದ್ದಂತೆ 2.88 ಲ.ಕೋ.ರೂ.ಗಳಷ್ಟು ಏರಿಕೆಯಾಗಿ 28.58 ಲ.ಕೋ.ರೂ.ಗಳಿಗೆ ತಲುಪಿದೆ. ಇದಕ್ಕೆ ಹೋಲಿಸಿದರೆ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಂದ ಸಾಲ ಪಡೆಯುವಿಕೆ ಅನುಕ್ರಮವಾಗಿ ಶೇ.1 ಮತ್ತು ಶೇ.2.7ರಷ್ಟು ಮಂದಗತಿಯಲ್ಲಿತ್ತು. ಒಟ್ಟು 108.32 ಕೋ.ರೂ.ಗಳಷ್ಟು ಸಾಲಬಾಕಿಯಲ್ಲಿ ಅರ್ಧಕ್ಕೂ ಹೆಚ್ಚಿನ ಮೊತ್ತ ಇವೆರಡು ಕ್ಷೇತ್ರಗಳಿಗೆ ಸೇರಿವೆ.

          ಚಿಲ್ಲರೆ ಕ್ಷೇತ್ರದ ಪೈಕಿ ಶೇ.51.3ರಷ್ಟು ಸಿಂಹಪಾಲು ಹೊಂದಿರುವ ಗೃಹಸಾಲಗಳು ಈ ಅವಧಿಯಲ್ಲಿ ಶೇ.8.9ರಷ್ಟು ನಿಧಾನ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿದ್ದು, ಇದಕ್ಕೂ ಹಿಂದಿನ 12 ತಿಂಗಳ ಅವಧಿಯಲ್ಲಿ ಶೇ.11.1ರಷ್ಟು ಬೆಳವಣಿಗೆ ದಾಖಲಾಗಿತ್ತು. ಎರಡನೇ ಅಲೆಯು ಗೃಹಸಾಲಗಳ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು.

          ಆರ್ಬಿಐ ವರದಿಯಂತೆ ದೊಡ್ಡ ಉದ್ಯಮಗಳಿಗೆ ಸಾಲ ನೀಡಿಕೆ ಹಿಂದಿನ ವರ್ಷದ ಜುಲೈನಲ್ಲಿ ಶೇ.1.4ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದರೆ, 2021 ಜುಲೈನಲ್ಲಿ ಶೇ.2.9ರಷ್ಟು ಕುಗ್ಗಿದೆ. ಪರಿಣಾಮವಾಗಿ ಜುಲೈ 2021ರವರೆಗಿನ 12 ತಿಂಗಳ ಅವಧಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಒಟ್ಟಾರೆ ಸಾಲ ಬೆಳವಣಿಗೆಯು ಹೆಚ್ಚುಕಡಿಮೆ ಶೇ.1ರಲ್ಲಿಯೇ ನಿಂತಿದೆ. ಇದೇ ಅವಧಿಯಲ್ಲಿ ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆಯು ಶೇ.71.6ರಷ್ಟು ಸದೃಢ ಬೆಳವಣಿಗೆಯೊಂದಿಗೆ 1.63 ಲ.ಕೋ.ರೂ.ಗಳಿಗೆ ತಲುಪಿದೆ. ಕಿರು ಮತ್ತು ಸಣ್ಣ ಉದ್ಯಮಗಳಿಗೆ ಸಾಲ ನೀಡಿಕೆಯೂ ಶೇ.7.9ರಷ್ಟು ಏರಿಕೆಯಾಗಿದೆ.

ವಾಹನಗಳಿಗೆ ಸಾಲಗಳು ಹಿಂದಿನ ವರ್ಷದ 2.7ಕ್ಕೆ ಹೋಲಿಸಿದರೆ 2021 ಜುಲೈಗೆ ಶೇ.7.3ರಷ್ಟು ಏರಿಕೆಯನ್ನು ಕಂಡು 2,65,951 ಕೋ.ರೂ.ಗೆ ತಲುಪಿದೆ. ಇದೇ ವೇಳೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಾಲ ನೀಡಿಕೆ ಸಾಧನೆಯು ಉತ್ತಮವಾಗಿಯೇ ಮುಂದುವರಿದಿದ್ದ್ದು,2020 ಜುಲೈನಲ್ಲಿಯ ಶೇ.5.4ಕ್ಕೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

              ತನ್ಮಧ್ಯೆ ವಿವಿಧ ಕಾರಣಗಳಿಂದಾಗಿ ಬ್ಯಾಂಕುಗಳು ಕಳೆದ 12 ತಿಂಗಳುಗಳಲ್ಲಿ ದೂರಸಂಪರ್ಕ,ಸಿಮೆಂಟ್,ಲೋಹಗಳು ಮತ್ತು ಲೋಹ ಉತ್ಪನ್ನಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಲನೀಡಿಕೆ ಪ್ರಮಾಣವನ್ನು ಕಡಿಮೆಗೊಳಿಸಿವೆ. ಈ ಅವಧಿಯಲ್ಲಿ               ಬಂದರುಗಳು,ನಿರ್ಮಾಣ,ರಸಗೊಬ್ಬರ,ಚರ್ಮ ಮತ್ತು ಸಕ್ಕರೆ ಕ್ಷೇತ್ರಗಳ ಸಾಲಬಾಕಿಯೂ ಕಡಿಮೆಯಾಗಿದೆ. ಆದರೆ ಬ್ಯಾಂಕುಗಳು ರಸ್ತೆ ಕ್ಷೇತ್ರ ಹಾಗೂ ಹರಳುಗಳು ಮತ್ತು ಆಭರಣಗಳ ಉದ್ಯಮಕ್ಕೆ ಸಾಲ ನೀಡಿಕೆಯನ್ನು ಹೆಚ್ಚಿಸಿವೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries