ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಭಾರತದ ಹೋರಾಟ ಪರಿಣಾಮಕಾರಿಯಾಗಿದ್ದು, ದೇಶದಲ್ಲಿ ನಿತ್ಯ 1.25 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯಕರ್ತರೊಂದಿಗೆ ಮತ್ತು ಕೊರೋನವೈರಸ್ ರೋಗ (ಕೋವಿಡ್ -19) ವಿರುದ್ಧ ಲಸಿಕಾ ಫಲಾನುಭವಿಗಳೊಂದಿಗೆ ವರ್ಚುವಲ್ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಭಾರತವು ಪ್ರತಿದಿನ 1.25 ಕೋಟಿ ಕೋವಿಡ್ ಲಸಿಕೆಗಳನ್ನು ನೀಡುತ್ತಿದೆ. ಇದು ಜಗತ್ತಿನ ಹಲವಾರು ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಹೇಳಿದರು.
ಇದೇ ವೇಳೆ ಹಿಮಾಚಲ ಪ್ರದೇಶ ಆರೋಗ್ಯ ವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಪ್ರತೀಯೊಬ್ಬ ನಾಗರೀಕನಿಗೂ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಿದ ದೇಶದ ಮೊದಲ ರಾಜ್ಯ ಎಂಬ ಸಾಧನೆಯನ್ನು ಹಿಮಾಚಲ ಪ್ರದೇಶ ಮಾಡಿದೆ. ಹಿಮಾಚಲ ಪ್ರದೇಶವು ಲಾಜಿಸ್ಟಿಕ್ ತೊಂದರೆಗಳ ಹೊರತಾಗಿಯೂ ಎಲ್ಲಾ ಅರ್ಹ ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಿದ ಮೊದಲ ಚಾಂಪಿಯನ್ ರಾಜ್ಯವಾಗಿದೆ. ಸಿಕ್ಕಿಂ ಮತ್ತು ದಾದ್ರಾ ಮತ್ತು ನಗರ ಹವೇಲಿ ಕೂಡ ಈ ಗುರಿಯನ್ನು ಸಾಧಿಸಿವೆ ಎಂದು ಹೇಳಿದರು.
ಶಿಮ್ಲಾ ಜಿಲ್ಲೆಯ ದೊಡ್ರ ಕ್ವಾರ್ ಸಿವಿಲ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾಡಿದ ಡಾ. ರಾಹುಲ್ ಜೊತೆ ಸಂವಾದ ನಡೆಸಿದ ಮೋದಿ, ಕೋವಿಡ್ ಲಸಿಕೆಗಳನ್ನು ನೀಡುವಾಗ ಒಂದೇ ಬಾಟಲಿಯಲ್ಲಿರುವ 11 ಡೋಸ್ ಗಳನ್ನು ಬಳಸಿದರೆ ಶೇ .10 ರಷ್ಟು ವೆಚ್ಚವನ್ನು ಉಳಿಸಬಹುದು ಎಂದು ಹೇಳಿದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೂಡ ಈ ಸಂದರ್ಭದಲ್ಲಿ ಮಾತನಾಡಿ, ನವೆಂಬರ್ 30 ರೊಳಗೆ ರಾಜ್ಯದ ಎಲ್ಲ ಫಲಾನುಭವಿಗಳಿಗೆ ಸಂಪೂರ್ಣ ಲಸಿಕೆ ಹಾಕಲಾಗುವುದು ಎಂದು ಭರವಸೆ ನೀಡಿದರು.