ಕೊಚ್ಚಿ: ಕೇರಳ ಲಾಟರಿಯ ಓಣಂ ಬಂಪರ್ ಡ್ರಾ ನಡೆದು ಪ್ರಥಮ ಬಹುಮಾನಿತನು ಯಾರೆಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ತಿರುವೊಣಂ ಬಂಪರ್ ಲೊಟರಿಯ ಮೊದಲ ಬಹುಮಾನ ವಿಜೇತ ಬೆಳಕಿಗೆ ಬಂದಿರುವರು. ತೃಪೂಣಿತ್ತುರ ಮರಟ್ ನಿವಾಸಿ ಜಯಪಾಲನ್ ಎಂಬ ಆಟೋ ಚಾಲಕನಿಗೆ 12 ಕೋಟಿಯ ಬಂಪರ್ ಲಾಟರಿಯ ಭಾಗ್ಯದೇವತೆಯ ರೂಪದಲ್ಲಿ ಬಾಗಿಲು ತೆರೆದು ಬಂದಿರುವಳು. ಲೋಟರಿ ಟಿಕೆಟ್ ನ್ನು ಕೆನರಾ ಬ್ಯಾಂಕಿನ ಮರಟ್ ಶಾಖೆಗೆ ಹಸ್ತಾಂತರಿಸಿದ್ದಾರೆ. ಜಯಪಾಲನ್ ಅವರು ಮರಟ್ ನ ಮೀನಾಕ್ಷಿ ಲೊಟರಿ ಎಂಜನ್ಸಿಯಿಂದ ಟಿಕೇಟ್ ಖರೀದಿಸಿದ್ದರು.
ಸೆ. 9 ರಂದು ಜಯಪಾಲನ್ ಅವರಿಗೆ ಐದು ಸಾವಿರ ರೂ.ಗಳ ಲಾಟರಿಯೊಂದು ಲಭಿಸಿದ್ದು, ಆ ಹಣದಿಂದ ಓಣಂ ಬಂಪರ್ ಲಾಟರಿ ಖರೀದಿಸಿದ್ದರು. ಫಾನ್ಸಿ ನಂಬರ್ ನೋಡುವಾಗ ಇತರ ಟಿಕೆಟ್‍ಗಳ ಜೊತೆಯಲ್ಲಿ ಓಣಂ ಬಂಪರ್ ತೆಗೆದುಕೊಳ್ಳಲು ನಿರ್ಧರಿಸಿದೆ. ಲಾಟರಿ ಡ್ರಾ ನಡೆದು ಅಲ್ಪಹೊತ್ತಲ್ಲಿ ಪ್ರಥಮ ಬಹುಮಾನ ತನಗೇ ಬಂದಿರುವುದನ್ನು ಖಚಿತಪಡಿಸಿದೆ ಎಂದು ಜಯಪಾಲನ್ ಹರ್ಷ ವ್ಯಕ್ತಪಡಿಸಿದರು. ಲಭಿಸುವ ಮೊತ್ತದಿಂದ ಸಾಲಗಳನ್ನು ಮರಳಿಸಿ ಇತರ ವ್ಯವಹಾರಗಳಿಗೆ ಬಳಸಲಾಗುವುದೆಂದು ಜಯಪಾಲನ್ ತಿಳಿಸಿದ್ದಾರೆ.
ವಿಶೇಷವೆಂದರೆ ಡ್ರಾ ಪ್ರಕಟಗೊಳ್ಳುತ್ತಿರುವಂತೆ ವಿದೇಶದಲ್ಲಿ ವ್ಯಾಪಾರಿಯಾಗಿರುವ ಸೈದಲವಿ ಎಂಬವರು ಪ್ರಥಮ ಬಹುಮಾನ ತನಗೇ ಬಂದಿರುವುದೆಂದು ತಗಾದೆ ತೆಗೆದಿರುವ ಮಧ್ಯೆ ನಿಜವಾದ ಭಾಗ್ಯವಂತನನ್ನು ಪತ್ತೆ ಮಾಡಲಾಗಿದೆ.