ನವದೆಹಲಿ :ಶಿಕ್ಷಣವು ಸಾರ್ವತ್ರಿಕವಾಗಿ ಈಗಲೂ ಲಭ್ಯವಿರದ ಈ ದೇಶದಲ್ಲಿ ಶಿಕ್ಷಣಕ್ಕೆ ಬೇಡಿಕೆಯು ಸಾಕಷ್ಟು ದೊಡ್ಡದೇ ಆಗಿದೆ. ಈ ಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿರುವ ಖಾಸಗಿ ವಿವಿಗಳು ಕಳೆದ ಅರ್ಧ ಶತಕದಲ್ಲಿ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದ್ದು,ಇತರ ವಿಧಗಳ ವಿವಿಗಳನ್ನು ಹಿಂದ್ಕಿಕಿವೆ.
ಇತ್ತೀಚಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್‌ಇ) 219-20 ರ ಅಂಕಿಅಂಶಗಳಂತೆ 2015-16ರಲ್ಲಿ 276ರಷ್ಟಿದ್ದ ಖಾಸಗಿ ವಿವಿಗಳ ಸಂಖ್ಯೆ 2019-20ರ ವೇಳೆಗೆ 407ಕ್ಕೆ ಜಿಗಿದಿದೆ. ಈ 131 ಖಾಸಗಿ ವಿವಿಗಳಲ್ಲದೆ ಇನ್ನೂ ಹಲವಾರು ಖಾಸಗಿ ವಿವಿಗಳು ಶೀಘ್ರವೇ ಆರಂಭಗೊಳ್ಳಲು ಸಜ್ಜಾಗಿವೆ.
2015-16ರಲ್ಲಿ 799ರಷ್ಟಿದ್ದ ಎಲ್ಲ ವಿವಿಗಳ (ಖಾಸಗಿ ಮತ್ತು ಸರಕಾರಿ) ಸಂಖ್ಯೆ ಈಗ 1,043ಕ್ಕೆ ತಲುಪಿದ್ದು,ಶೇ.30.5ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದೇ ವೇಳೆ ಖಾಸಗಿ ವಿವಿಗಳು ಶೇ.47ರಷ್ಟು ಬೆಳವಣಿಗೆಯನ್ನು ಕಂಡಿವೆ.
ಸರಕಾರವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಸರಕಾರಿ ವಿವಿ,ರಾಜ್ಯ ಖಾಸಗಿ ವಿವಿ,ಡೀಮ್ಡ್ ಖಾಸಗಿ ವಿವಿ,ಡೀಮ್ಡ್ ಸರಕಾರಿ ವಿವಿ,ಕೇಂದ್ರೀಯ ವಿವಿ ಮತ್ತು ರಾಷ್ಟ್ರೀಯ ಮಹತ್ವದ ಸಂಸ್ಥೆ;ಹೀಗೆ ಆರು ವಿಧಗಳಲ್ಲಿ ವರ್ಗೀಕರಿಸಿದೆ.
ಭಾರತದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಖ್ಯವಾಗಿ (ಸುಮಾರು ಶೇ.70ರಷ್ಟು) ಪ್ರಾಬಲ್ಯವನ್ನು ಸ್ವಯಂ ಆರ್ಥಿಕ ನೆರವಿನ ಮತ್ತು ಅನುದಾನರಹಿತ ವಿವಿಗಳು ಮತ್ತು ಕಾಲೇಜುಗಳು ಹೊಂದಿವೆ ಎಂದು ವಿದ್ಯಾರ್ಥಿ ಸಲಹಾ ವೇದಿಕೆಯಾಗಿರುವ ಕಾಲೇಜ್ ದೇಖೋ ನಡೆಸಿರುವ ವಿಶ್ಲೇಷಣೆಯು ಹೇಳಿದೆ.
ಎಐಎಸ್‌ಎಚ್‌ಇ ವರದಿಯನ್ನು ಆಧರಿಸಿ ನಡೆಸಲಾದ ಈ ವಿಶ್ಲೇಷಣೆಯು,ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸರಾಸರಿ 1000ಕ್ಕೂ ಹೆಚ್ಚಿನ ಕಾಲೇಜುಗಳು ಸ್ಥಾಪನೆಯಾಗಿವೆ ಮತ್ತು ಇವುಗಳ ಪೈಕಿ ಶೇ.80ಕ್ಕೂ ಅಧಿಕ ಕಾಲೇಜುಗಳು ಖಾಸಗಿಯಾಗಿದ್ದು,ಉಳಿದವು ಸರಕಾರಿ ಅನುದಾನಿತ ಶಿಕ್ಷಣಸಂಸ್ಥೆಗಳ ವ್ಯಾಪ್ತಿಗೆ ಸೇರಿವೆ ಎನ್ನುವುದನ್ನು ತೋರಿಸಿದೆ.
ನೂತನ ವಿವಿಗಳಲ್ಲಿ ಆಂಧ್ರಪ್ರದೇಶದ ಶ್ರೀ ಸಿಟಿಯ ಆರ್ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಬೆಂಬಲಿತ ಕೆಆರ್‌ಇಎ ವಿವಿ ಮತ್ತು ಹರ್ಯಾಣದ ಸೋನೆಪತ್ನ ರಿಷಿಹುಡ್ ವಿವಿ ಸೇರಿವೆ. ಬಹು ವಿಭಾಗೀಯ ಸಂಸ್ಥೆಗಳಾಗಿರುವ ಇವೆರಡೂ ಕಳೆದ ವರ್ಷ ಆರಂಭಗೊಂಡಿದ್ದು,ಎಲ್ಲ ವಿಭಾಗಗಳಲ್ಲಿ 'ಉದಾರ ಶಿಕ್ಷಣ'ವನ್ನು ನೀಡುವ ಗುರಿಯನ್ನು ಹೊಂದಿವೆ.
ಬೆಂಗಳೂರಿನ ವಿದ್ಯಾಶಿಲ್ಪ ವಿವಿ, ರಾಜಕೋಟ್ ನ ಮಾರ್ವಾಡಿ ವಿವಿ, ಅಹ್ಮದಾಬಾದ್ ನ ಅನಂತ ನ್ಯಾಷನಲ್ ವಿವಿ ಮತ್ತು ಪಶ್ಚಿಮ ಬಂಗಾಳದ ಅದಮಾಸ್ ವಿವಿ ಇವೂ ಕಳೆದ ಐದು ವರ್ಷಗಳಲ್ಲಿ ಆರಂಭಗೊಂಡಿರುವ ಪ್ರತಿಷ್ಠಿತ ವಿವಿಗಳಾಗಿದ್ದು,ಈ ಎಲ್ಲ ವಿವಿಗಳು ಖಾಸಗಿಯವರಿಂದ ಆರಂಭಗೊಂಡಿವೆ.