ಕಾಸರಗೋಡು: ರಾಜ್ಯ ಸರಕಾರದ 100 ದಿನ ಕ್ರಿಯಾ ಕಾರ್ಯಕ್ರಮ ಅಂಗವಾಗಿ ಎಲ್ಲರಿಗೂ ಸ್ವಂತ ಜಾಗ ಎಂಬ ಗುರಿಯನ್ನು ಪೂರ್ಣಗೊಳಿಸುವ ಯತ್ನದ ಅಂಗವಾಗಿ ಭೂಹಕ್ಕು ಪತ್ರ ವಿತರಣೆ ಮೇಳ ಸೆ.14ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭೂಹಕ್ಕು ಪತ್ರ ವಿತರಣೆ ಮೇಳದ ಜಿಲ್ಲಾ ಮಟ್ಟದ ಉದ್ಘಾಟನೆ ಅಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆಯಲಿದ್ದು, ಜಿಲ್ಲೆಯ ಉಸ್ತುವಾರಿ ಹೊಂದಿರುವ ಬಂದರು-ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಚಾಲನೆ ನಡೆಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅವರು ಮುಖ್ಯ ಅತಿಥಿಯಾಗಿರುವರು.
ಮಂಜೇಶ್ವರ ತಾಲೂಕಿನಲ್ಲಿ ನಡೆಯುವ ಭೂಹಕ್ಕು ಪತ್ರ ವಿತರಣೆ ಮೇಳವನ್ನು ಶಾಸಕ ಎ.ಕೆ.ಎಂ.ಅಶ್ರಫ್, ಹೊಸದುರ್ಗ ತಾಲೂಕಿನಲ್ಲಿ ಶಾಸಕ ಇ.ಚಂದ್ರಶೇಖರನ್, ವೆಳ್ಳರಿಕುಂಡ್ ತಾಲೂಕಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸುವರು.
ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಈ ಸಮಾರಂಭಗಳು ನಡೆಯಲಿವೆ. ಆಯ್ದ ಮಂದಿಗೆ ಮಾತ್ರ ಸಮಾರಂಭದಲ್ಲಿ ಭೂಹಕ್ಕು ಪತ್ರ ವಿತರಣೆ ನಡೆಯಲಿದೆ. ಉಳಿದವರಿಗೆ 2 ದಿನಗಳ ಅವಧಿಯಲ್ಲಿ ಗ್ರಾಮ ಕಚೇರಿಗಳ ಮೂಲಕ ವಿತರಣೆ ಜರುಗಲಿದೆ ಎಂದವರು ನುಡಿದರು.
ಕಾಸರಗೋಡು ಜಿಲ್ಲೆಯಲ್ಲಿ ವಿತರಣೆ ನಡೆಯಲಿರುವುದು 585 ಭೂಹಕ್ಕು ಪತ್ರಗಳು
ಸೆ.14ರಂದು ನಡೆಯುವ ಭೂಹಕ್ಕು ಪತ್ರ ವಿತರಣೆ ಮೇಳಗಳ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 584 ಭೂಹಕ್ಕು ಪತ್ರಗಳ ವಿತರಣೆ ಜರುಗಲಿದೆ. ಲಾಂಡ್ ಅಸೈನ್ ಮೆಂಟ್, ಮಿಗತೆ ಭೂಮಿ, ಲಾಂಡ್ ಟ್ರಿಬ್ಯೂ ನಲ್, ದೇವಸ್ವಂ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಭೂ ಹಕ್ಕು ಪತ್ರಗಳ ವಿತರಣೆಯಾಗಲಿದೆ. ಕೇರಳ ಜಾಗ ವಿಂಗಡಣೆ ಕಾಯಿದೆ ಪ್ರಕಾರ ಕಾಸರಗೋಡು ತಾಲೂಕಿನಲ್ಲಿ 86 ಭೂಹಕ್ಕು ಪತ್ರಗಳು, ಮಂಜೇಶ್ವರ ತಾಲೂಕಿನಲ್ಲಿ 17 ಭೂಹಕ್ಕು ಪತ್ರಗಳು, ವೆಳ್ಳರಿಕುಂಡ್ ತಾಲೂಕಿನಲ್ಲಿ 43 ಭೂಹಕ್ಕು ಪತ್ರಗಳು, ಹೊಸದುರ್ಗ ತಾಲೂಕಿನಲ್ಲಿ 53 ಭೂಹಕ್ಕು ಪತ್ರಗಳು ವಿತರಣೆಗೊಳ್ಳಲಿವೆ.
ಮುನಿಪಲ್ ಭೂಹಕ್ಕು ಪತ್ರ ವಿತರಣೆ ಸಂಬಂಧ 11 ಭೂಹಕ್ಕು ಪತ್ರಗಳ ವಿತರಣೆ ಜರುಗುವುದು. ಕ್ರಯವಿಕ್ರಯ ಸರ್ಟಿಫಿಕೆಟ್ ವಿಭಾಗದಲ್ಲಿ 229 ಭೂಹಕ್ಕು ಪತ್ರಗಳು, ಮಿಗತೆ ವಿಭಾಗದಲ್ಲಿ 72 ಭೂಹಕ್ಕು ಪತ್ರಗಳು, ದೇವಸ್ವಂ ವಿಭಾಗದಲ್ಲಿ 75 ಭೂಹಕ್ಕು ಪತ್ರಗಳು ವಿತರಣೆಗೊಳ್ಳಲಿವೆ ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಕೆ.ರವಿಕುಮಾರ್ ಉಪಸ್ಥಿತರಿದ್ದರು.