ಶ್ರೀನಗರ: ಶ್ರೀನಗರದ ಬಾನಂಗಳದಲ್ಲಿ ಭಾನುವಾರ ಬೆಳಿಗ್ಗೆ ಫೈಟರ್ ಜೆಟ್‌ಗಳು, ಚಿನುಕ್ ಹೆಲಿಕಾಪ್ಟರ್‌ಗಳು ಆಕರ್ಷಕ ಚಿತ್ತಾರ ಮೂಡಿಸಿ ಗಮನ ಸೆಳೆದವು. 14 ವರ್ಷಗಳ ನಂತರ ನಡೆದ 'ವೈಮಾನಿಕ ಪ್ರದರ್ಶನ'ವು ನೋಡುಗರ ಕಣ್ಮನ ಸೆಳೆದವು.
ಇಲ್ಲಿನ ದಾಲ್ ಸರೋವರದ ಪಕ್ಕದಲ್ಲಿನ ಶೇರ್-ಇ-ಕಾಶ್ಮೀರ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್‌ಕೆಐಸಿಸಿ) ಕಣಿವೆಯ ನೂರಾರು ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಭಾರತೀಯ ವಾಯುಪಡೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಐಎಎಫ್‌ನ 'ಆಕಾಶ ಗಂಗಾ'ದ ಸ್ಕೈಡೈವಿಂಗ್ ಮತ್ತು 'ಸೂರ್ಯಕಿರಣ್'ನ ಏರೋಬಾಟಿಕ್ ಡಿಸ್ಲೇ ತಂಡಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ನಿಮ್ಮ ಕನಸಿಗೆ ರೆಕ್ಕೆಗಳನ್ನು ನೀಡಿ' ಎಂಬ ವಿಷಯದ ಅಡಿಯಲ್ಲಿ ನಡೆದ ಪ್ರದರ್ಶನದ ಮುಖ್ಯ ಉದ್ದೇಶ, ಕಾಶ್ಮೀರ ಕಣಿವೆಯ ಯುವಕರಲ್ಲಿ ಜಾಗೃತಿ ಮೂಡಿಸುವುದು, ಭಾರತೀಯ ವಾಯುಪಡೆಗೆ ಸೇರಲು ಪ್ರೋತ್ಸಾಹಿಸುವುದು ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಎಂದು ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.