ಕುಂಬಳೆ: ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಯ ನೂತನ ನಿರ್ಮಿತಗಳ ಉದ್ಘಾಟನೆಯನ್ನು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೆ.14 ರಂದು ಆನ್ ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ಯೋಜನ ಅನುದಾನದಿಂದ ನೀಡಲಾದ ಒಂದು ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿರ್ಮಿಸಲಾದ ಐದು ತರಗತಿ ಕೋಣೆಗಳ ಕಟ್ಟಡ, ವಿಶಾಲವಾದ ಅಡುಗೆ ಕೋಣೆ, ಶಾಲಾ ನಿವೇಶನದ ಆವರಣ ಗೋಡೆ, ವಿಶಾಲವಾದ ಸಭಾ ಮಂಟಪ ಇತ್ಯಾದಿ ಇದರಲ್ಲಿ ಒಳಗೊಂಡಿದೆ.
ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸ್ಮರಣೀಯ ಶಿಲೆಯ ಅನಾವರಣ ಕಾರ್ಯವನ್ನು ನಿರ್ವಹಿಸುವರು. ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷೆ ತಾಹಿರ ಯೂಸುಫ್ ಪ್ರಧಾನ ಭಾಷಣಗೈಯಲಿರುವರು. ಜನಪ್ರತಿನಿಧಿಗಳು, ಶಿಕ್ಷಣ ಸಂರಕ್ಷಣ ಯಜ್ಞದ ಸಂಯೋಜಕರು, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿರುವರು. ಈ ಬಗ್ಗೆ ನಡೆದ ಸಂಘಟನ ಸಭೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಬಿಎ ಪೇರಾಲ್ ವಿಚಾರ ಮಂಡನೆ ಮಾಡಿದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಸ್ವಾಗತಿಸಿ, ಶಿಕ್ಷಕ ಸಂಘದ ಕಾರ್ಯದರ್ಶಿ ವಿನುಕುಮಾರ್ ವಂದಿಸಿದರು.