ಅಹಮದಾಬಾದ್: ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ₹15 ಸಾವಿರ ಕೋಟಿ ಮೌಲ್ಯದ ಸುಮಾರು 3 ಸಾವಿರ ಕೆಜಿಯಷ್ಟು ಹೆರಾಯಿನ್ ವಶಪಡಿಸಿ ಕೊಂಡಿದ್ದಾರೆ.
ಇದು ದೇಶದಲ್ಲೇ ಅತಿ ದೊಡ್ಡ ಪ್ರಮಾಣದ ಹಾಗೂ ಅಧಿಕ ಮೌಲ್ಯದ ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣವಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಮುಂಜಾನೆ ಮುಂದ್ರಾ ಬಂದರಿನಲ್ಲಿ ಆಂಧ್ರಪ್ರದೇಶದ ದಂಪತಿ ಹಾಗೂ ಇಬ್ಬರು ಅಫ್ಗನ್ನರನ್ನು ಬಂಧಿಸಿ, ಅವರಿಂದ ಬೃಹತ್ ಪ್ರಮಾಣದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತುಗಳನ್ನು ಪತ್ತೆ ಮಾಡಲು ಡಿಆರ್‌ಐ ಅಭಿವೃದ್ಧಿಪಡಿಸಿರುವ 'ನಿರ್ದಿಷ್ಟ ಬುದ್ದಿಮತ್ತೆ'ಯಿಂದ(ಸ್ಪೆಸಿಫಿಕ್ ಇಂಟೆಲಿಜೆನ್ಸ್) ಈ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆ ಮಾಡಲು ಸಾಧ್ಯವಾಯಿತು' ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.
'ವಿಜಯವಾಡದ ಮೆ. ಆಶಿ ಟ್ರೇಡಿಂಗ್ ಕಂಪನಿಯು ಅರೆ ಸಂಸ್ಕರಿತ ಟಾಲ್ಕ್ ಕಲ್ಲುಗಳೆಂದು ಘೋಷಿಸಿದ್ದ ವಸ್ತುಗಳನ್ನು ಅಫ್ಗಾನಿಸ್ತಾನದಿಂದ ಆಮದು ಮಾಡಿಕೊಂಡಿತ್ತು. ಅದು ಇರಾನ್ ಬಂಡಾರ್ ಅಬ್ಬಾಸ್ ಬಂದರ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿತ್ತು. ಈ ದಾಸ್ತಾನನ್ನು ಪರಿಶೀಲಿಸಿದ ಡಿಆರ್‌ಐ ಅಭಿವೃದ್ಧಿಪಡಿಸಿದ ಉಪಕರಣ, ಈ ದಾಸ್ತಾನಿನಲ್ಲಿ ಮಾದಕ ದ್ರವ್ಯಗಳಿದೆ ಎಂದು ಪತ್ತೆ ಮಾಡಿತು' ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಬಂದರಿಗೆ ಬಂದಿದ್ದ 40 ಟನ್‌ಗಳ ಎರಡು ಕಂಟೇನರ್‌ಗಳನ್ನು ಪರೀಕ್ಷಿಸಿದರು. ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೇತೃತ್ವದಲ್ಲಿ ಕಂಟೇನರ್‌ಗಳ ಒಳಗಿದ್ದ ವಸ್ತುಗಳ ಪರೀಕ್ಷೆ ನಡೆಸಲಾಯಿತು. ನಂತರ ತಜ್ಞರು, ಇದರಲ್ಲಿರುವುದು ಹೆರಾಯಿನ್ ಎಂದು ದೃಢಪಡಿಸಿದರು.
'ಎನ್‌ಡಿಪಿಎಸ್ ಕಾಯ್ದೆ 1985'ರ ಅನ್ವಯ ತಪಾಸಣೆ ನಡೆಸಿ, ಮೊದಲ ಕಂಟೇನರ್‌ನಿಂದ 1999.579 ಕೆಜಿ ಹಾಗೂ ಎರಡನೇ ಕಂಟೇನರ್‌ನಿಂದ 988.64 ಕೆಜಿಗಳು ಸೇರಿ ಒಟ್ಟು ಎರಡು ಕಂಟೇನರ್‌ನಿಂದ 2988.219 ಕೆಜಿಗಳಷ್ಟು ಹೆರಾಯಿನ್ ವಶಪಡಿಸಿಕೊಳ್ಳಲಾಯಿತು' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ರೀತಿ ಅಹಮದಾಬಾದ್, ದೆಹಲಿ, ಚೆನ್ನೈ ಮತ್ತು ಗುಜರಾತ್‌ನ ಗಾಂಧಿಧಾಮ ಮತ್ತು ಮಾಂಡವಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿ ಗೋವಿಂದರಾಜು ಮತ್ತು ಪತ್ನಿ ವೈಶಾಲಿ ಅವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಪತಿ-ಪತ್ನಿ ಇಬ್ಬರೂ ಚೆನ್ನೈ ಮೂಲದವರು. ಅವರು ವಿಜಯವಾಡದಲ್ಲಿ 'ರಫ್ತು - ಆಮದು ಕಂಪನಿಯನ್ನು ನೋಂದಣಿ ಮಾಡಿಸಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಈ ಇಬ್ಬರನ್ನು ಡಿಆರ್‌ಐ ಬಂಧಿಸಿದ್ದು, ಅವರನ್ನು ಭುಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇಬ್ಬರನ್ನು ವಿಚಾರಣೆಗಾಗಿ ಹತ್ತು ದಿನಗಳ ಕಾಲ ಡಿಆರ್‌ಐ ವಶಕ್ಕೆ ನೀಡಿದೆ.