ನವದೆಹಲಿ: ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಐದು ರಾಷ್ಟ್ರಗಳ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಬ್ರಿಕ್ಸ್ ವಾರ್ಷಿಕ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ವರ್ಚುವಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಐದು ರಾಷ್ಟ್ರಗಳು ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿವೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ಸ್ವಾಧೀನಪಡಿಸಿಕೊಂಡಿದ್ದರಿಂದ ಈ ಪ್ರದೇಶವು ಹಲವಾರು ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ಬ್ರಿಕ್ಸ್ ಸಮಾವೇಶದಲ್ಲಿ ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ಪಾಲ್ಗೊಂಡಿದ್ದವು.
ಕಳೆದ 13 ವರ್ಷಗಳಲ್ಲಿ ಬ್ರಿಕ್ಸ್ ಮಾಡಿರುವ ಹಲವು ಸಾಧನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪ್ರಗತಿಶೀಲ ಆರ್ಥಿಕತೆಯ ಪ್ರಭಾವಿ ಧ್ವನಿಗಳಾಗಿರುವ ನಾವು ಅಭಿವೃದ್ಧಿಶೀಲ ದೇಶಗಳಿಗಾಗಿ ವೇದಿಕೆಯೊಂದನ್ನು ರೂಪಿಸಿದ್ದೇವೆ ಎಂದರು.
ಮುಂದಿನ 15 ವರ್ಷಗಳಲ್ಲಿ ಬ್ರಿಕ್ಸ್ ಇನ್ನಷ್ಟು ಪ್ರಭಾವಿಯಾಗುವಂತೆ ಮಾಡಲು ನಾವೆಲ್ಲರೂ ಗಮನಹರಿಸಬೇಕು. ಬ್ರಿಕ್ಸ್ನ ಅಧ್ಯಕ್ಷತೆಯ ಗೌರವಕ್ಕೆ ಪಾತ್ರವಾಗಿರುವ ಭಾರತವು ಸತತ ಪ್ರಗತಿ, ಸಹಯೋಗ ಮತ್ತು ಸಹಮತದ ಆಶಯವನ್ನು ಮುಂದಿಟ್ಟಿದೆ ಎಂದು ಮೋದಿ ಹೇಳಿದರು.
ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್ ಸಹಕಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರಿಕ್ಸ್ ಶೃಂಗಸಭೆ ಅಧ್ಯಕ್ಷತೆಯ ಗೌರವ 2ನೇ ಬಾರಿಗೆ ಒಲಿದಿದೆ. 2016ರಲ್ಲಿ ಗೋವಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ ಅಧ್ಯಕ್ಷತೆ ವಹಿಸಿದ್ದರು.