ನವದೆಹಲಿ: ಸೆಪ್ಟೆಂಬರ್ 5 ಶಿಕ್ಷಕರ ದಿನ, ಮಾಜಿ ರಾಷ್ಟ್ರಪತಿ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮಜಯಂತಿಯ ಅಂಗವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಶಿಕ್ಷಕರ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಇಡೀ ಶಿಕ್ಷಕ ಸಮುದಾಯಕ್ಕೆ ಶುಭಕಾಮನೆಗಳನ್ನು ಸಲ್ಲಿಸಿದ್ದು ಕೋವಿಡ್-19 ಕಷ್ಟದ ಸಮಯದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಂಡು ಅವರಿಗೆಲ್ಲ ತಮ್ಮ ಕೈಲಾದ ರೀತಿಯಲ್ಲಿ ಶಿಕ್ಷಣವನ್ನು ಧಾರೆಯೆರೆದ ಶಿಕ್ಷಕರನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಅವರು, ಶಿಕ್ಷಕರ ದಿನದ ಪ್ರಯುಕ್ತ ಇಡೀ ಶಿಕ್ಷಕ ಸಮುದಾಯಕ್ಕೆ ನನ್ನ ಪ್ರಣಾಮಗಳು, ಯುವ ಮನಸ್ಸುಗಳನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು. ಕೋವಿಡ್-19 ಸಂಕಷ್ಟ ಕಾಲದಲ್ಲಿ ಆನ್ ಲೈನ್ ನಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದ ಶಿಕ್ಷಕರ ಪಾತ್ರ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ. ಅಲ್ಲದೆ ಡಾ ಎಸ್ ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ದೇಶಾದ್ಯಂತ ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರು ತತ್ವಜ್ಞಾನಿ ಮತ್ತು ಖ್ಯಾತ ಲೇಖಕರು ಕೂಡ ಆಗಿದ್ದರು, ಭಾರತದ ಎರಡನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಹುಟ್ಟಿದ್ದು ಸೆಪ್ಟೆಂಬರ್ 5, 1888. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅದ್ವಿತೀಯ. 1962ರಲ್ಲಿ ಅವರ ಗೌರವಾರ್ಥ ಶಿಕ್ಷಕರ ದಿನವನ್ನು ಆಚರಿಸಲು ಆರಂಭವಾಯಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಸಮುದಾಯಕ್ಕೆ ಶುಭ ಕೋರಿದ್ದಾರೆ. ದೇಶದ ಯುವ ಜನತೆಯ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ದೇಶ ಕಟ್ಟುವಲ್ಲಿ ಅವರ ಪಾತ್ರವನ್ನು ಕೊಂಡಾಡಿದ್ದಾರೆ.