ಕೊಚ್ಚಿ: ವ್ಯಕ್ತಿಯೋರ್ವ ತಾನು ಕೋವಿಡ್-19 ಹರಡುವ ಅಪಾಯವನ್ನೊಡ್ಡುತ್ತಿಲ್ಲ ಎಂದರೂ ಆ ವ್ಯಕ್ತಿ ಪ್ರತಿ ಬಾರಿ ಹೊರಹೋಗುವುದಕ್ಕೂ 72 ಗಂಟೆಗಳ ಮುನ್ನ ಕಡ್ಡಾಯವಾಗಿ ಏಕೆ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕೆಂದು ಕೇಂದ್ರ ಸರ್ಕಾರ, ಕೇರಳ ಸರ್ಕಾರವನ್ನು ಅಲ್ಲಿನ ಹೈಕೋರ್ಟ್ ಪ್ರಶ್ನಿಸಿದೆ.
ಲಸಿಕೆ ಪಡೆಯಲು ನಿರಾಕರಿಸಿದ ವ್ಯಕ್ತಿಯೋರ್ವರು ಕೇರಳ ಸರ್ಕಾರ ಜಾರಿಗೊಳಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಕೇರಳ ಜಾರಿಗೊಳಿಸಿರುವ ಮಾರ್ಗಸೂಚಿಗಳ ಪ್ರಕಾರ ಯಾವುದೇ ವ್ಯಕ್ತಿ ಕೆಲಸಕ್ಕೆ ಹೊರಗೆ ಹೋಗುವುದಕ್ಕೂ 72 ಗಂಟೆಗಳ ಮುನ್ನ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗಿದೆ ಅಥವಾ ಕನಿಷ್ಟ ಒಂದು ಡೋಸ್ ಲಸಿಕೆ ಪಡೆಯಬೇಕಾಗುತ್ತದೆ ಅಥವಾ ಒಂದು ತಿಂಗಳಿಗಿಂತಲೂ ಹಳೆಯದಾದ ಕೋವಿಡ್-19 ಪಾಸಿಟೀವ್ ವರದಿಯನ್ನು ಹೊಂದಿರಬೇಕಾಗುತ್ತದೆ.
ನ್ಯಾ.ಪಿ ಬಿ ಸುರೇಶ್ ಕುಮಾರ್ ಕೇಂದ್ರ ಸರ್ಕಾರವನ್ನೂ ಪ್ರಕರಣದಲ್ಲಿ ಭಾಗಿಯಾಗಿಸಿದ್ದು ಈ ವಿಷಯವಾಗಿ ಕೇಂದ್ರದ ನಿಲುವನ್ನು ಕೇಳಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಹೇಳಿಕೆ, ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕ ಈ ವಿಷಯದಲ್ಲಿ ವಿವರವಾಗಿ ವಿಚಾರಣೆ ನಡೆಸುವುದಾಗಿ ಹೇಳಿದೆ.