ನವದೆಹಲಿ: ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 26,041 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು 191 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣಗಳಾಗಿವೆ.
ಈ ಮೂಲಕ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,36,78,786ಕ್ಕೆ ಏರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
24 ಗಂಟೆಗಳಲ್ಲಿ ದೇಶದಲ್ಲಿ 3,856 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ದೇಶದಲ್ಲಿ ಈಗ ಇರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,99,620. ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.89ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದ 276 ಮಂದಿ ಸಾವನ್ನಪ್ಪಿದ್ದು, ಸೋಂಕಿನಿಂದ ಸತ್ತವರ ಸಂಖ್ಯೆ 4,47,194ಕ್ಕೆ ಏರಿದಂತಾಗಿದೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ 97.78ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.