ನವದೆಹಲಿ: ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಭಾರತವು ವಿಶ್ವದ ಎಲ್ಲ ದೇಶಗಳಿಗಿಂತಲೂ ಉತ್ತಮ ರೀತಿಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) 17ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಶಾ, ಯಾವುದೇ ಅನಾಹುತದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವವ ನಾಗರಿಕರಿಗೆ ಕೇಂದ್ರವು ತರಬೇತಿ ನೀಡುವ ಮೂಲಕ ದೇಶಾದ್ಯಂತ 350 ಜಿಲ್ಲೆಗಳಲ್ಲಿ 'ಆಪ್ತ ಮಿತ್ರ' (ವಿಪತ್ತಿನಲ್ಲಿ ಸ್ನೇಹಿತರು) ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಭಾರತದಲ್ಲಿ 130 ಕೋಟಿಯಷ್ಟು ದೊಡ್ಡ ಜನಸಂಖ್ಯೆ ಇದ್ದರೂ, ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ದೇಶವು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಬೇರೆಲ್ಲ ದೇಶಗಳಿಗಿಂತಲೂ ಅತ್ಯುತ್ತಮ ರೀತಿಯಲ್ಲಿ ಹೋರಾಡಿದೆ ಎಂದು ಹೇಳಿದರು.
ಸಾಂಕ್ರಾಮಿಕ ರೋಗ ಎದುರಿಸಲು ಅನೇಕ ದೇಶಗಳು ಕಠಿಣ ಸಮಯ ಎದುರಿಸಿದವು. ಯಾವುದೇ ತಟಸ್ಥ ಏಜೆನ್ಸಿ ವಿಶ್ಲೇಷಣೆ ಮಾಡಿದರೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಮತ್ತು ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ ಎಂಬ ತೀರ್ಮಾನಕ್ಕೆ ಬರುತ್ತದೆ. ಸಾಂಕ್ರಾಮಿಕದ ಸಮಯದಲ್ಲಿ ಎನ್‌ಡಿಎಂಎ ಮಾಡಿರುವ ಕೆಲಸ ಕೂಡ ಶ್ಲಾಘನೀಯ ಎಂದು ಶಾ ಪ್ರಶಂಸಿಸಿದರು.
ಯೋಜನೆ ಯಶಸ್ವಿ
ದೇಶದ 25 ರಾಜ್ಯಗಳ 30 ಜಿಲ್ಲೆಗಳಲ್ಲಿ 'ಆಪ್ತ ಮಿತ್ರ' ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು ಯಶಸ್ವಿಯಾಗಿದೆ ಎಂದು ಶಾ ಹೇಳಿದರು.
ಯಾವುದೇ ಅನಾಹುತದ ವೇಳೆ ತೊಂದರೆಗೆ ಒಳಗಾದವರಿಗೆ ತಕ್ಷಣ ಸ್ಪಂದಿಸುವುದು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಹೇಗೆ ಸಹಾಯ ಮಾಡುವುದು ಮತ್ತು ಅವರನ್ನು ಹೇಗೆ ರಕ್ಷಿಸುವುದು ಎಂಬುದರ ಬಗ್ಗೆ ಈ ಯೋಜನೆಯಡಿ ತರಬೇತಿ ನೀಡಲಾಗುವುದು. ಯೋಜನೆಯಡಿ ವಿಮಾ ರಕ್ಷಣೆ ಇದೆ. ಈ ನಿಟ್ಟಿನಲ್ಲಿ 28 ರಾಜ್ಯಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ ಎಂದು ಶಾ ಹೇಳಿದರು.
1999ರಲ್ಲಿ ಒಡಿಶಾದಲ್ಲಿ ಸಂಭವಿಸಿದ ಮಹಾಚಂಡಮಾರುತದ ವೇಳೆ ಸುಮಾರು 10,000 ಜನರು ಪ್ರಾಣ ಕಳೆದುಕೊಂಡರು. ಆದರೆ ಈ ವರ್ಷ ಮೂರು ಚಂಡಮಾರುತಗಳಲ್ಲಿ 50 ಜನರು ಮೃತಪಟ್ಟಿಪ್ಪಿದ್ದಾರೆ. 50 ಜನರ ಸಾವು ಕೂಡ ಒಳ್ಳೆಯದಲ್ಲ. ಯಾವುದೇ ವಿಪತ್ತುಗಳಲ್ಲಿ ಜೀವ ಹಾನಿ ತಡೆಯುವ ಗುರಿ ನಮ್ಮದಾಗಬೇಕು ಎಂದರು.
ವಿಪತ್ತು ನಿರ್ವಹಣೆಯಲ್ಲಿ ಸಮುದಾಯ ಸ್ವಯಂಸೇವಕರಿಗೆ ತರಬೇತಿ ನೀಡುವ ಆಪ್ತ ಮಿತ್ರ ಯೋಜನೆಯನ್ನು 25 ರಾಜ್ಯಗಳ ಆಯ್ದ 30 ಅತ್ಯಂತ ಹೆಚ್ಚು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಎನ್‌ಡಿಎಂಎ ಅನುಷ್ಠಾನಗೊಳಿಸುತ್ತಿದೆ.
ಸಮುದಾಯ ಸ್ವಯಂಸೇವಕರಿಗೆ ತಮ್ಮ ಸಮುದಾಯದ ತುರ್ತು ಅಗತ್ಯಗಳಿಗೆ ಸ್ಪಂದಿಸಬೇಕಾದ ಕೌಶಲಗಳನ್ನು ಕಲಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆ ಮೂಲಕ ಪ್ರವಾಹದ ವೇಳೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅನುವು ಮಾಡಿಕೊಡಲಿದೆ.