ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡವರಲ್ಲಿ 2-3 ತಿಂಗಳಿನಲ್ಲಿ ಲಸಿಕೆಯಿಂದ ಉತ್ಪತ್ತಿಯಾದ ಪ್ರತಿಕಾಯಗಳು ತಗ್ಗಲು ಆರಂಭವಾಗುತ್ತದೆ ಎಂದು ಈಚಿನ ಅಧ್ಯಯನವೊಂದು ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಭುವನೇಶ್ವರ ಪ್ರಾದೇಶಿಕ ಕೇಂದ್ರ ಈ ಎರಡು ಲಸಿಕೆಗಳಿಂದ ಉತ್ಪತ್ತಿಯಾದ ಪ್ರತಿಕಾಯ ಮಟ್ಟ ಹಾಗೂ ದೇಹದಲ್ಲಿ ಅವುಗಳ ಉಪಸ್ಥಿತಿ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಿದೆ.
ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿ ಎರಡು ತಿಂಗಳ ನಂತರ ಪ್ರತಿಕಾಯಗಳು ತಗ್ಗುತ್ತವೆ. ಕೋವಿಶೀಲ್ಡ್ ಲಸಿಕೆ ಪಡೆದುಕೊಂಡವರಲ್ಲಿ ಮೂರು ತಿಂಗಳ ನಂತರ ಪ್ರತಿಕಾಯಗಳು ಕ್ಷೀಣಿಸಲು ಆರಂಭವಾಗುತ್ತದೆ ಎಂಬುದನ್ನು ಅಧ್ಯಯನ ಉಲ್ಲೇಖಿಸಿದೆ.
ಈ ಅಧ್ಯಯನದ ಕುರಿತು ಐಸಿಎಂಆರ್-ಆರ್‌ಎಂಆರ್‌ಸಿ ವಿಜ್ಞಾನಿ ಡಾ. ದೇವದತ್ತ ಭಟ್ಟಾಚಾರ್ಯ ವಿವರ ಹಂಚಿಕೊಂಡಿದ್ದಾರೆ. '614 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ 50.2% ಮಂದಿ, ಅಂದರೆ 308 ಮಂದಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು. 49.8%, ಅಂದರೆ 306 ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರು.
ಲಸಿಕೆ ಪಡೆದುಕೊಂಡ ನಂತರ ಸೋಂಕು ತಗುಲಿದ 81 ಪ್ರಕರಣಗಳು ಕಂಡುಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸೋಂಕಿಗೆ ತುತ್ತಾಗದ 533 ಆರೋಗ್ಯ ಕಾರ್ಯಕರ್ತರ ಪ್ರತಿಕಾಯ ಮಟ್ಟ ಹೆಚ್ಚಾಗಿ ಕ್ಷೀಣಿಸಿರುವುದಾಗಿ ಅಧ್ಯಯನ ತಿಳಿಸಿದೆ. ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿಕಾಯ ಮಟ್ಟದ ಉಪಸ್ಥಿತಿ ಕುರಿತು ನಿಖರ ಮಾಹಿತಿಗೆ ಇನ್ನೂ ಎರಡು ವರ್ಷಗಳ ಕಾಲ ಈ ಅಧ್ಯಯನವನ್ನು ಮುಂದುವರೆಸುವುದಾಗಿ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.
' ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಪ್ರತಿಕಾಯ ಮಟ್ಟ ಎರಡು ತಿಂಗಳ ನಂತರ ತಗ್ಗಿರುವುದು ಕಂಡುಬಂದಿದೆ. ಕೋವಿಶೀಲ್ಡ್‌ನಲ್ಲಿ ಈ ಅವಧಿ ಮೂರು ತಿಂಗಳದ್ದಾಗಿದೆ' ಎಂದು ಪುನರುಚ್ಚರಿಸಿದ್ದಾರೆ.
ಮಾರ್ಚ್ 2021ರಲ್ಲಿ ಅಧ್ಯಯನವನ್ನು ಆರಂಭಿಸಲಾಗಿತ್ತು. ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಸಂಪೂರ್ಣ ಎರಡು ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ 'ಇಮ್ಯುನೊಗ್ಲೋಬ್ಯುಲಿನ್ ಜಿ' (ಸೋಂಕಿನ ವಿರುದ್ಧ ಸಾಮಾನ್ಯ ಪ್ರತಿಕಾಯ) ಉಪಸ್ಥಿತಿ ಕುರಿತು ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಮೊದಲ ಡೋಸ್ ಲಸಿಕೆ ಪಡೆದ ನಂತರ 24 ವಾರಗಳ ಕಾಲ ಅವರ ಮೇಲೆ ನಿಗಾ ಇಟ್ಟು, ಪರೀಕ್ಷೆಗೂ ಒಳಪಡಿಸಲಾಗಿತ್ತು.
'ಕಾಲಾನಂತರ ಲಸಿಕೆಗಳಿಂದ ಉತ್ಪತ್ತಿಯಾದ ಪ್ರತಿಕಾಯ ಮಟ್ಟ ಕ್ಷೀಣಿಸಿದರೂ ದೇಹದಲ್ಲಿ ಪ್ರತಿಕಾಯ ಉಳಿದುಕೊಂಡಿರುತ್ತದೆ ಎಂದು ಆರ್‌ಎಂಆರ್‌ಸಿ ನಿರ್ದೇಶಕರಾದ ಸಂಘಮಿತ್ರ ಪಾಟಿ ಹೇಳಿದ್ದಾರೆ. ಬೂಸ್ಟರ್ ಶಾಟ್‌ಗಳ ಅಗತ್ಯದ ಕುರಿತು ಮಾತನಾಡಿರುವ ಅವರು, ಬೂಸ್ಟರ್ ಡೋಸ್ ಲಸಿಕೆಗಳ ಅಗತ್ಯವನ್ನು ಒತ್ತಿಹೇಳಲು ಇನ್ನೂ ವೈಜ್ಞಾನಿಕ ಪುರಾವೆಗಳ ಅಗತ್ಯವಿದೆ' ಎಂದಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಮೊದಲು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲಾಯಿತು. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುತ್ತಿದೆ. ಉಳಿದಂತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ದೊರೆತಿದೆ. ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಲಸಿಕೆಗೆ ಅನುಮೋದನೆ ನೀಡಲಾಗಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಇದೇ ಜನವರಿ 16ರಿಂದ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ 72,77,98,325 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆ ಆರಂಭಿಸಲಾಗಿತ್ತು.