ಸೆಪ್ಟೆಂಬರ್ 22ನ್ನು ವಿಶ್ವ ರೋಸ್ ದಿನವನ್ನಾಗಿ ಆಚರಿಸಲಾಗುವುದು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರ ಬದುಕಿನಲ್ಲಿ ಭರವಸೆಯ ಆಶಾ ಕಿರಣ ತುಂಬಲು ಈ ದಿನವನ್ನು ಆಚರಿಸಲಾಗುವುದು.
ಕ್ಯಾನ್ಸರ್ ಕಾಯಿಲೆ ಬಂದ ಮೇಲೆ ಪ್ರತಿ ಕ್ಷಣ ಅದರ ವಿರುದ್ಧ ಹೋರಾಡಬೇಕಾಗುತ್ತದೆ. ಕಣ್ಣಿನ ಮುಂದೆ ಸಾವು ನರ್ತನ ಮಾಡುತ್ತಿದ್ದರೂ ಧೃತಿಗೆಡದೆ ಅದನ್ನು ಸೋಲಿಸಲು ಪ್ರಯತ್ನಿಸಬೇಕಾಗಿದೆ. ಕ್ಯಾನ್ಸರ್ ಬಂದಾಗ ಮಾಡುವ ಚಿಕಿತ್ಸೆ, ಕೀಮೋಥೆರಪಿ ಇವೆಲ್ಲದಕ್ಕಿಂತ ಬೇಕಾಗಿರುವುದು ಮನೋಧೈರ್ಯ. ಈ ಕಾಯಿಲೆಯನ್ನು ಗೆಲ್ಲುತ್ತೇನೆ ಎಂಬ ಮನೋಧೈರ್ಯ ಇದ್ದವರು ಗುಣಮುಖರಾದ ಎಷ್ಟೂ ಉದಾಹರಣೆಗಳಿವೆ. ಆದ್ದರಿಮದ ಅವರಿಗೆ ಧೈರ್ಯ ತುಂಬಬೇಕು, ಅವರ ಮನಸ್ಸಿನಲ್ಲಿ ಭರವಸೆಯ ಆಶಾ ಕಿರಣ ಮೂಡಿಸಬೇಕು. ಹೀಗೆ ಅವರ ಬದುಕಿನಲ್ಲಿ ಭರವಸೆ ತುಂಲು, ಧೈರ್ಯ ತುಂಬಲು ಈ ದಿನವನ್ನು ಆಚರಿಸಲಾಗುವುದು.
ವಿಶ್ವ ರೋಸ್ ದಿನ ಆಚರಿಸುವುದರ ಹಿಂದೆ ಮನ ಮಿಡಿಯುವ ಕತೆಯಿದೆ. ಕೆನಡಾದ ಮೆಲಿಂಡಾ ರೋಸ್ ಎನ್ನುವ 12 ವರ್ಷದ ಬಾಲಕಿಗೆ ಆಸ್ಕಿನ್ ಟ್ಯೂಮರ್ ಇರುವುದು ತಿಳಿದು ಬಂತು. ಇದೊಂದು ಅಪರೂಪದ ಬ್ಲಡ್ ಕ್ಯಾನ್ಸರ್‌ನ ವಿಧವಾಗಿದೆ. ಇನ್ನೇನು ಆಕೆ ಬದುಕಿರುವುದು ಕೆಲವೇ ದಿನಗಳಷ್ಟೇ ಎಂದು ವೈದ್ಯರು ತಿಳಿಸಿದರು. ಆಕೆಯ ಸುತ್ತ ಇರುವವವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ರೋಸ್ ನಮ್ಮನ್ನು ಬಿಟ್ಟು ಅಗಲುತ್ತಾಳೆ ಎಂಬ ನೋವು ಕಾಡಿತ್ತು. ಆದರೆ ಆಕೆ ಮಾತ್ರ ಬದುಕಿದ್ದ ಪ್ರತಿ ಕ್ಷಣವೂ ಕ್ಯಾನ್ಸರ್ ವಿರುದ್ಧ ನಗು-ನಗುತ್ತಾ ಹೋರಾಡಿದಳು. ತನ್ನ ಸುತ್ತ ಇರುವವರಲ್ಲಿಯೂ ಭರವಸೆಯನ್ನು ತುಂಬುವ ಪ್ರಯತ್ನ ಮಾಡುತ್ತಿದ್ದಳು.
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವಾಗ ಈ ನೋವು ಮರೆಯಲು ಅನೇಕ ಕವನಗಳನ್ನು ಬರೆದಳು, ಸ್ಪೂರ್ತಿ ತುಂಬುವ ಲೆಟರ್‌ಗಳನ್ನು ಬರೆದಳು, ಕ್ಯಾನ್ಸರ್ ರೋಗಿಗಳಿಗೆ ಇ-ಮೇಲ್ ಮಾಡಿ ಧೈರ್ಯ ತುಂಬುತ್ತಿದ್ದಳು... ತಾನು ಕೊನೆಯುಸಿರು ಎಳೆಯುವವರಿಗೂ ಧೈರ್ಯದಿಂದಲೇ ಅದರ ವಿರುದ್ಧ ಹೋರಾಡಿದಳು, ಅವಳ ಆ ದಿಟ್ಟ ಹೋರಾಟವನ್ನು ಸ್ಮರಿಸಿ, ಇತರ ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯ ತುಂಬವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.
ಈ ದಿನ ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹೂ ಕೊಟ್ಟು ಅವರಲ್ಲಿ ಧೈರ್ಯ, ಭರವಸೆ ತುಂಬುವ ಪ್ರಯತ್ನ ಮಾಡಲಾಗುವುದು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಸ್ಪೆಷಲ್ ಕಾರ್ಡ್ ನೀಡಿ ಅವರ ಮೇಲೆ ನಮಗಿರುವ ಪ್ರೀತಿಯನ್ನು ವ್ಯಕ್ತ ಪಡಿಸಲಾಗುವುದು.
ಕ್ಯಾನ್ಸರ್ ಎಂಬುವುದು ಮಾರಕ ಕಾಯಿಲೆಯಾದರೂ ಇದನ್ನು ಗೆದ್ದವರೂ ನಮ್ಮ ನಡುವೆ ಇದ್ದಾರೆ, ಅದಕ್ಕೆ ಕಾರಣ ಅವರಿಗೆ ಸಿಕ್ಕ ಆರೈಕೆ ಹಾಗೂ ಪ್ರೀತಿ. ಕ್ಯಾನ್ಸರ್ ಗೆಲ್ಲಲು ಮನೋಸ್ಥೈರ್ಯವನ್ನು ತುಂಬಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ.