ನವದೆಹಲಿ: ಇಂಡೊ-ಪೆಸಿಫಿಕ್ ಭಾಗದಲ್ಲಿ ಚೀನಾದ ಹೆಚ್ಚಿದ ಮಿಲಿಟರಿ ಕಾರ್ಯಾಚರಣೆಯನ್ನು ಸಮರ್ಥವಾಗಿ ಎದುರಿಸಲು ಒಟ್ಟಾರೆಯಾಗಿ ರಕ್ಷಣಾ ಮತ್ತು ರಚನಾತ್ಮಕ ಸಹಕಾರವನ್ನು ವೃದ್ಧಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಉನ್ನತ ಮಟ್ಟದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯ ಮಟ್ಟದ ಮಾತುಕತೆ ಆರಂಭಿಸಿದೆ.
ಇಂದು ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರಂಭದ ದಿನ 2+2 ಮಾತುಕತೆಯನ್ನು ಆಸ್ಟ್ರೇಲಿಯಾದ ವಿದೇಶಾಂಗ ಹಾಗೂ ರಕ್ಷಣಾ ಇಲಾಖೆ ಸಚಿವರುಗಳಾದ ಮಾರಿಸ್ ಪೇನ್ ಮತ್ತು ಪೀಟರ್ ಡಟನ್ ಜೊತೆ ನಡೆಸಿದ್ದಾರೆ.
ಇಂದು ಇಡೀ ವಿಶ್ವದ ಗಮನ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಮೇಲೆ ನೆಟ್ಟಿರುವುದರಿಂದ ಇಂದಿನ ಮಾತುಕತೆಯಲ್ಲಿ ಅಫ್ಘಾನಿಸ್ತಾನ ವಿಷಯ, ಮುಂದಿನ ದಿನಗಳಲ್ಲಿ ಆ ದೇಶದೊಂದಿಗೆ ಇಟ್ಟುಕೊಳ್ಳುವ ಸಂಬಂಧಗಳ ಬಗ್ಗೆ ಚರ್ಚೆ ನಡೆಯಿತು.
ತಮ್ಮ ಮಾತುಕತೆಯಲ್ಲಿ, ಇಬ್ಬರು ರಕ್ಷಣಾ ಮಂತ್ರಿಗಳು ಅಫ್ಘಾನಿಸ್ತಾನದ ದುರ್ಬಲ ಭದ್ರತಾ ಪರಿಸ್ಥಿತಿ ಮತ್ತು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಿಂದ ಭಯೋತ್ಪಾದನೆಯ ಹರಡುವಿಕೆಗೆ ಸಂಬಂಧಿಸಿದಂತೆ ತಮ್ಮ ಕಳವಳ, ಆತಂಕವನ್ನು ವ್ಯಕ್ತಪಡಿಸಿದರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ವಿಸ್ತರಿಸಲು ಕ್ವಾಡ್ ಸದಸ್ಯ ರಾಷ್ಟ್ರಗಳ ಹೊಸ ಪ್ರಯತ್ನಗಳ ನಡುವೆ ವಿದೇಶಿ ಮತ್ತು ರಕ್ಷಣಾ ಸಚಿವರ ಮಾತುಕತೆ ನಡೆಯುತ್ತಿದೆ.ಭಾರತ ಮತ್ತು ಆಸ್ಟ್ರೇಲಿಯಾವನ್ನು ಹೊರತುಪಡಿಸಿ, ಕ್ವಾಡ್ ಸದಸ್ಯ ದೇಶಗಳಲ್ಲಿ ಅಮೆರಿಕ ಮತ್ತು ಜಪಾನ್ ಕೂಡ ಸೇರಿದೆ.
ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವ ಒಟ್ಟಾರೆ ಗುರಿಯ ಭಾಗವಾಗಿ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವಿನ ಸಂವಾದ ನಡೆದಿದೆ.ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರಕ್ಷಣಾ ಮತ್ತು ಸೇನಾ ಸಹಕಾರವು ಹೆಚ್ಚುತ್ತಿದೆ.