ನವದೆಹಲಿ: ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಹಾಗೂ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್, 18 ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ 2/3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿರುವುದಾಗಿ ಮಂಗಳವಾರ ಹೇಳಿದೆ.
ಮುಂದಿನ ವಾರದೊಳಗೆ ಈ ಕುರಿತ ವರದಿಯನ್ನು ಔಷಧ ನಿಯಂತ್ರಕ ಸಂಸ್ಥೆಗೆ ಸಲ್ಲಿಸುವ ನಿರೀಕ್ಷೆಯಿರುವುದಾಗಿ ಕಂಪನಿ ತಿಳಿಸಿದೆ.
ಲಸಿಕೆ ಸಂಬಂಧ ಪ್ರಯೋಗಗಳ ನಂತರ ದತ್ತಾಂಶ ವಿಶ್ಲೇಷಣೆ ನಡೆಯುತ್ತಿದ್ದು, ವರದಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಹೇಳಿದ್ದಾರೆ.
ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ 2/3 ಪ್ರಯೋಗಗಳನ್ನು ಪೂರ್ಣಗೊಳಿಸಲಾಗಿದೆ. ದತ್ತಾಂಶ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ವಾರದಲ್ಲಿ ಮಾಹಿತಿಯನ್ನು ಸಲ್ಲಿಸಲಿದ್ದೇವೆ. ಆನಂತರ ಸಂಪೂರ್ಣ ವರದಿ ನೀಡಲಾಗುವುದು ಎಂದಿದ್ದಾರೆ.
ಕೊರೊನಾ ವಿರುದ್ಧ ಇದೇ ಸಂಸ್ಥೆ ಮೂಗಿನ ಮೂಲಕ ನೀಡುವ ಇಂಟ್ರಾನೇಸಲ್ ಲಸಿಕೆಯ ಎರಡನೇ ಹಂತದ ಪ್ರಯೋಗ ನಡೆಸಿದ್ದು, ಈ ಪ್ರಯೋಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎಲಾ ಘೋಷಿಸಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಯುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿಯೇ ಭಾರತ್ ಬಯೋಟೆಕ್ ಸಂಸ್ಥೆ, ಮೂಗಿನ ಮೂಲಕ ನೀಡುವ ಲಸಿಕೆ BBV154 ಪ್ರಯೋಗ ನಡೆಸಲು ಕೇಂದ್ರದಿಂದ ಅನುಮೋದನೆ ಪಡೆದುಕೊಂಡಿದೆ.
ದೇಶದಲ್ಲಿ ಮಾನವ ಪ್ರಯೋಗಕ್ಕೆ ಒಳಗಾದ ಮೊದಲ ನಾಸಿಕ ಲಸಿಕೆ BBV154 ಆಗಿದೆ. ಮೊದಲ ಹಂತದ ಪ್ರಯೋಗವನ್ನು 18-60 ವಯಸ್ಸಿನವರ ಮೇಲೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸೋಸಿಯೇಟ್ ಕೌನ್ಸಿಲ್ (ಬಿಐಆರ್‌ಎಸಿ) ಬೆಂಬಲದೊಂದಿಗೆ ಲಸಿಕೆ ಅಭಿವೃದ್ಧಿಗೊಂಡಿದೆ.
ಮಾನವನ ದೇಹಕ್ಕೆ ಸೋಂಕು ಪ್ರವೇಶಿಸುವ ಸ್ಥಳವಾಗಿರುವ ಮೂಗಿನ ಮೂಲಕ ಈ ಲಸಿಕೆಯನ್ನು ನೀಡಲಾಗುವುದು. ಈ ಲಸಿಕೆ ಮೂಗಿನಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಈ ಮೂಲಕ ಸೋಂಕು ಹರಡುವಿಕೆಯಿಂದ ರಕ್ಷಣೆ ನೀಡುತ್ತದೆ ಎಂದು ಅವರು ವಿವರಿಸಿದರು.
650 ಸ್ವಯಂಸೇವಕರ ಮೇಲೆ ಈ ಲಸಿಕೆಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪು ಕೋವ್ಯಾಕ್ಸಿನ್ ಅನ್ನು ಮೊದಲ ಡೋಸ್ ಆಗಿ ಹಾಗೂ ಇಂಟ್ರಾನೇಸಲ್ ಲಸಿಕೆಯನ್ನು ಎರಡನೇ ಡೋಸ್ ಆಗಿ ಪಡೆದುಕೊಂಡಿತ್ತು. ಎರಡನೇ ಗುಂಪಿನವರು ಇಂಟ್ರಾನೇಸಲ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು. ಮೂರನೇ ಗುಂಪು ಮೊದಲ ಡೋಸ್ ಇಂಟ್ರಾನೇಸಲ್ ಲಸಿಕೆ ಹಾಗೂ ಕೋವ್ಯಾಕ್ಸಿನ್ ಅನ್ನು ಎರಡನೇ ಡೋಸ್ ಪಡೆದಿದೆ ಎಂದು ಎಲಾ ವಿವರಿಸಿದ್ದಾರೆ.
ಪ್ರತಿ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 35 ಮಿಲಿಯನ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ 55 ಮಿಲಿಯನ್ ಡೋಸ್‌ಗಳ ಲಸಿಕೆ ಉತ್ಪತ್ತಿ ಮಾಡುವುದಾಗಿ ಎಲಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಉತ್ಪಾದನಾ ಕಾರ್ಯ ಚುರುಕುಗೊಂಡಿದೆ ಎಂದು ತಿಳಿಸಿದರು.
ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಮೊದಲು ಲಸಿಕೆ ಉತ್ಪಾದನೆ ಮಾಡಿದ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಒಂದಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ 77.8% ದಕ್ಷತೆ ತೋರಿದೆ.
ಅಕ್ಟೋಬರ್ ತಿಂಗಳಿನಿಂದ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ಇತರೆ ದೇಶಗಳಿಗೆ ಹೆಚ್ಚುವರಿ ಕೊರೊನಾ ಲಸಿಕೆಗಳನ್ನು ರಫ್ತು ಮಾಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಲಾ, ಕೇಂದ್ರ ಅನುಮತಿ ನೀಡಿದರೆ ಹೆಚ್ಚಿನ ಲಸಿಕೆಗಳ ರಫ್ತಿಗೆ ಕಂಪನಿ ಸಿದ್ಧವಿದೆ ಎಂದು ಹೇಳಿದ್ದಾರೆ.