ನವದೆಹಲಿ: ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಇದೇ 25ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಕರೆ ನೀಡಿರುವ 'ಭಾರತ್ ಬಂದ್'ಗೆ ಎಡ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಈ ಕುರಿತು ಗುರುವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ, ಸಿಪಿಎಂ ಮತ್ತು ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿ ಪಕ್ಷಗಳು, ದೇಶ ವ್ಯಾಪಿ ನಡೆಯುವ ಈ ಪ್ರತಿಭಟನೆಯನ್ನು ನಾಗರಿಕರೆಲ್ಲರೂ ಬೆಂಬಲಿಸುವಂತೆ ಮನವಿ ಮಾಡಿವೆ.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಬೆಳೆಗಳಿಗೆ ನೀಡುತ್ತಿರುವ ಬೆಂಬಲ ಬೆಲೆಯನ್ನು ಕಾನೂನಿನ ಚೌಕಟ್ಟಿ ನೊಳಗೆ ತರುವಂತೆ ಒತ್ತಾಯಿಸಿ ಸಾವಿರಾರು ರೈತರು ಹತ್ತು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರೈತರನ್ನು ಮಾತುಕತೆ ಕರೆಯದೇ ನಿರ್ಲಕ್ಷ್ಯಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
'ಮೋದಿ ಸರ್ಕಾರದ ಈ ಹಠಮಾರಿ ಧೋರಣೆಯನ್ನು ಎಡ ಪಕ್ಷಗಳು ಖಂಡಿಸುತ್ತಿವೆ. ಈ ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು. ಎಂಎಸ್‌ಪಿಯನ್ನು ಕಾನೂನು ಚೌಕಟ್ಟಿನಲ್ಲಿ ತರಬೇಕು ಎಂದು ಒತ್ತಾಯಿಸುತ್ತಿವೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
'ಭಾರತ್ ಬಂದ್ ಯಶಸ್ವಿಗೊಳಿಸಲು ಎಡಕ್ಷಗಳು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡುತ್ತವೆ. ಹಾಗೆಯೇ ಈ ಬಂದ್ ಅನ್ನು ಬೆಂಬಲಿಸುವಂತೆ ದೇಶದ ಜನರಲ್ಲೂ ಮನವಿ ಮಾಡುತ್ತವೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.