ಕಾಸರಗೋಡು: ರಾಜ್ಯದ ಕಾಷ್ ( ಕೇರಳ ಅಕ್ರಡಿಟೇಷನ್ ಸ್ಟಾಡಂಡ್ರ್ಸ್ ಫಾರ್ ಹಾಸ್ಪಿಟಲ್) ಗುಣಮಟ್ಟದ ಪ್ರಥಮ ಹೋಮಿಯೋ ಆಸ್ಪತ್ರೆ ಎಂಬ ನೆಗಳ್ತೆಗೆ ಚಿತ್ತಾರಿಕಲ್ಲ್ ಹೋಮಿಯೋ ಆಸ್ಪತ್ರೆ ಪಾತ್ರವಾಗಿದೆ. ಹೋಮಿಯೋ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸುತ್ತಿರುವ ಯೋಜನೆ ಕಾಷ್ ಗುಣಮಟ್ಟ. ಈ ನಿಟ್ಟಿನಲ್ಲಿ ಆಸ್ಪತ್ರೆಯ ರೋಗಿ ಸೌಹಾರ್ದ ಆಸ್ಪತ್ರೆಯ ಕಟ್ಟಡದಲ್ಲಿ ಗಮನಾರ್ಹ ಬದಲಾವಣೆ ನಡೆಸಲಾಗಿದೆ. ರೋಗಿಗಳು ಕುಳಿತುಕೊಳ್ಳಲು ಆಸನ, ಟೋಕನ್ ಸಿಸ್ಟಂ, ಕುಡಿಯುವ ನೀರು, ವಿಶೇಷಚೇತನರಿಗೆ ವಿಶೇಷ ಶೌಚಾಲಯ ಸಹಿತ ಸೌಲಭ್ಯಗಳು, ಸೌರಶಕ್ತಿಯ ಬಳಕೆ ಸಹಿತ ಇಲ್ಲಿನ ಅನೇಕ ವಿಚಾರಗಳು ಗಮನಸೆಳೆದಿವೆ.
ಚಿತ್ತಾರಿಕಲ್ಲು ಹೋಮಿಯೋ ಆಸ್ಪತ್ರೆಗಳಿಗೆ ಆಗಮಿಸುವ ಮಂದಿಗಾಗಿ ದಿಕ್ಕು ಸೂಚಕ ಫಲಕಗಳು, ದೂರು/ಸಲಹೆ ಪೆಟ್ಟಿಗೆಗಳು ಸ್ಥಾಪಿಸಲಾಗಿವೆ. ಆಸ್ಪತ್ರೆಯ ಎಲ್ಲ ಚಟುವಟಿಕೆಗಳ ದಾಖಲೀಕರಣ ವೈಜ್ಞಾನಿಕ ರೂಪದಲ್ಲಿ ನಡೆಸಲಾಗುತ್ತಿದೆ. ಈ ಮೂಲಕ ಅನೇಕ ಬದಲಾವಣೆ, ಸುಧಾರಣೆ ತರಲಾಗಿದೆ. ಈ ಮೂಲಕ ನೂರಕ್ಕೆ ನೂರು ಅಂಕ ಪಡೆದು ಆಸ್ಪತ್ರೆ ಕಾಷ್ ಅಕ್ರೆಡಿಟೇಷನ್ ಪಡೆದಿದೆ. ಜಿಲ್ಲೆಯಿಂದ ಮತ್ತು ರಾಜ್ಯ ಮಟ್ಟದ ಪರಿಣತರು ಮೂರು ಹಂತಗಳಲ್ಲಿ ಪರಿಶೀಲನೆ(ಮೌಲ್ಯಮಾಪನ) ನಡೆಸಿದ ನಂತರ ಈ ಸಂಸ್ಥೆ ಮನ್ನಣೆಗೆ ಪಾತ್ರವಾಗಿದೆ.
ಈ ಆಸ್ಪತ್ರೆಗೆ 2019-20 ವರ್ಷ ಲಭಿಸಿರುವ ಅಂಗೀಕಾರದ ಘೋಷಣೆ ಸೆ.25ರಂದು ಮಧ್ಯಾಹ್ನ 2 ಗಂಟೆಗೆ ಆನ್ ಲೈನ್ ರೂಪದಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಡೆಸುವರು. ಆಸ್ಪತ್ರೆ ಅಂಗಣದಲ್ಲಿ ನಡೆಯುವ ಈ ಸಂಬಂಧ ಸಮಾರಂಭವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸುವರು. ಗ್ರಾಮ ಪಂಚಾಯತ್ ಅಧ್ಯಕ್ಷ ಜೇಮ್ಸ್ ಪದ್ಮಾಕ್ಕಲ್ ಅಧ್ಯಕ್ಷತೆ ವಹಿಸುವರು.