ಕಾಸರಗೋಡು: ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಸೆ. 27ರಂದು ರಾಷ್ಟ್ರವ್ಯಾಪಿ ಹರತಾಳ ನಡೆಯಲಿದ್ದು, ಕೇರಳದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹರತಾಳ ನಡೆಯಲಿರುವುದಾಗಿ ಸಂಯುಕ್ತ ಮುಷ್ಕರ ಸಮಿತಿ ಕಾಸರಗೋಡು ಜಿಲ್ಲಾ ಪ್ರತಿನಿಧಿಗಳು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೋಟಾರು ವಾಹನ ಕಾರ್ಮಿಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ ಬಂದ್‍ನಲ್ಲಿ ಪಾಲ್ಗೊಳ್ಳಲಿದೆ. ನಿತ್ಯೋಪಯೋಗಿ ಸಾಮಗ್ರಿ, ಇಂಧನ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ, ಕೃಷಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಕೃಷಿಕರಿಗೆ ಮಾರಕವಾಗಿರುವ ಕೃಷಿ ಕಾನೂನು ಹಾಗೂ ಉದ್ಯೋಗ ಕಾನೂನು ತಿದ್ದುಪಡಿ ವಿಧೇಯಕ ಹಿಂತೆಗೆಯಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ತಡೆಗಟ್ಟಬೇಕು ಮುಂತಾದ ಬೇಡಿಕೆ ಮುಂದಿರಿಸಿ ಹರತಾಳ ನಡೆಯಲಿರುವುದಾಗಿ ಸಿಐಟಿಯು ಸಂಘಟನೆ ಮುಖಂಡ ಟಿ.ಕೆ ರಾಜನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.