ನವದೆಹಲಿ; ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಬಂದ್‌ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ.
ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಈಗಾಗಲೇ 300ಕ್ಕೂ ಅಧಿಕ ಸಂಘಟನೆಗಳು ಬಂದ್ ಬೆಂಬಲಿಸಿವೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಆದ್ದರಿಂದ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನ ಕೈಗೊಂಡಿವೆ.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ಸೆಪ್ಟೆಂಬರ್ 27ರ ಬಂದ್ ಅಂಗವಾಗಿ ವಿವಿಧ ರಾಜ್ಯಗಳಲ್ಲಿ ರೈತ ಮಹಾ ಪಂಚಾಯತ್ ಆಯೋಜನೆ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಇದಕ್ಕೆ ಉತ್ತಮ ಬೆಂಬಲ ಸಹ ಸಿಗುತ್ತಿದೆ.
ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯ ನೇತೃತ್ವವನ್ನು ದಿಗ್ವಿಜಯ್ ಸಿಂಗ್‌ಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕಿಸಾನ್ ಮಹಾ ಪಂಚಾಯತ್‌ಗೂ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಕೊಟ್ಟಿದೆ.
ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಸಿಪಿಐ(ಎಂ), ಸಿಪಿಐ, ಆರ್‌ಎಸ್‌ಪಿ ಸೇರಿದಂತೆ ಎಡ ಪಕ್ಷಗಳು ಭಾರತ್ ಬಂದ್‌ಗೆ ಬೆಂಬಲ ನೀಡಿವೆ. ಮೋದಿ ಮತ್ತು ಯೋಗಿ ಸರ್ಕಾರಕ್ಕೆ ರೈತರ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ರೈತ ಸಂಘಟನೆಗಳು ಹೇಳಿವೆ.
ದೆಹಲಿ ಹೊರವಲಯದಲ್ಲಿ ಸುಮಾರು 9 ತಿಂಗಳಿನಿಂದ ರೈತರು ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ. ಜನವರಿ 26ರಂದು ರೈತರು ದೆಹಲಿ ಪ್ರವೇಶಿಸಿದ್ದರು. ಆಗ ಹಿಂಸಾಚಾರ ನಡೆದಿತ್ತು.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಈಗಾಗಲೇ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ. ಈಗ ರೈತರ ಭಾರತ್ ಬಂದ್‌ಗೆ ಬೆಂಬಲ ನೀಡುವ ಮೂಲಕ ಕೇಂದ್ರದ ವಿರುದ್ಧದ ಹೋರಾಟವನ್ನು ಪಕ್ಷ ಮತ್ತಷ್ಟು ತೀವ್ರಗೊಳಿಸಲಿದೆ.
ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಕಾಯ್ದೆಯಲ್ಲಿ ತಿದ್ದುಪಡಿ ತರುವುದು ಬೇಡ. ಸಂಪೂರ್ಣ ರದ್ದು ಮಾಡಿ ಎಂಬುದು ರೈತ ಸಂಘಟನೆಗಳ ಬೇಡಿಕೆಯಾಗಿದೆ. ಸರ್ಕಾರದ ಪ್ರತಿನಿಧಿಗಳು ರೈತ ಸಂಘಟನೆಗಳ ಜೊತೆ ನಡೆಸಿದ 11 ಸಭೆಗಳು ಸಹ ವಿಫಲವಾಗಿವೆ.
ಬಿಜೆಪಿಯೇತರ ಪಕ್ಷಗಳು ಸೆಪ್ಟೆಂಬರ್ 27ರ ಭಾರತ್ ಬಂದ್‌ಗೆ ಬೆಂಬಲ ನೀಡಲಿದ್ದು, ಅದನ್ನು ಯಶಸ್ವಿಗೊಳಿಸಲು ಮುಂದಾಗಿವೆ. ಭಾನುವಾರ ಪ್ರಿಯಾಂಕಾ ವಾದ್ರಾ ರೈತರು ದೇಶದ ಧ್ವನಿ ಎಂದು ಹೇಳಿಕೆ ನೀಡಿದ್ದರು.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಭಾನುವಾರ ಕಿಸಾನ್ ಮಹಾ ಪಂಚಾಯತ್ ಆಯೋಜನೆ ಮಾಡಲಾಗಿತ್ತು. 15 ರಾಜ್ಯಗಳ 300ಕ್ಕೂ ಹೆಚ್ಚು ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ರೈತರ ಹೋರಾಟ ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.
ಅಕ್ಟೋಬರ್‌ನಲ್ಲಿ ಸ್ವರಾಜ್ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆ ನಡೆಸಲು ಉದ್ದೇಶಿಸಲಾಗಿದ್ದು ಕನ್ಯಾಕುಮಾರಿಯಿಂದ ನವದೆಹಲಿ ತನಕ ಯಾತ್ರೆ ನಡೆಯಲಿದೆ.
ಡಿಸೆಂಬರ್‌ನಲ್ಲಿ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಸೇರಿದಂತೆ ಹಲವಾರು ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.