ತಿರುವನಂತಪುರ: ಎರಡು ಬಗೆಯ ಬಾವಲಿಗಳ ಮಾದರಿಗಳಲ್ಲಿ ನಿಫಾ ವೈರಸ್ ವಿರುದ್ಧದ ಪ್ರತಿಕಾಯಗಳು ಕಂಡು ಬಂದಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಹೇಳಿದರು.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, 'ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯು (ಎನ್‌ಐವಿ) ಕೋಯಿಕ್ಕೋಡ್‌ನಲ್ಲಿ ವಿವಿಧ ಬಗೆಯ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಿದೆ. ಈಗ ಎರಡು ವಿಧದ ಬಾವಲಿಗಳಲ್ಲಿ ಪ್ರತಿಕಾಯಗಳು ಕಂಡು ಬಂದಿವೆ. ಬಾವಲಿಗಳಿಂದಲೇ ಈ ಮಾರಕ ಸೋಂಕು ಪ್ರಸರಣವಾಗುತ್ತದೆ ಎಂಬ ವಾದಕ್ಕೆ ಇದರಿಂದ ಪುಷ್ಟಿ ಸಿಕ್ಕಂತಾಗಿದೆ' ಎಂದರು.
'ಇತರ ಮಾದರಿಗಳ ಪರೀಕ್ಷೆಯೂ ನಡೆಯುತ್ತಿದ್ದು, ಶೀಘ್ರವೇ ಪರೀಕ್ಷಾ ವರದಿ ಕೈ ಸೇರಲಿದೆ' ಎಂದು ತಿಳಿಸಿದರು.
ಕೋಯಿಕ್ಕೋಡ್‌ನಲ್ಲಿ ನಿಫಾ ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು. 12 ವರ್ಷದ ಬಾಲಕನಲ್ಲಿ ನಿಫಾ ಸೋಂಕು ಇರುವುದು ಸೆ.4ರಂದು ಪತ್ತೆಯಾಗಿತ್ತು. ಈ ಸೋಂಕಿನಿಂದಾಗಿ ಬಾಲಕ ಸೆ. 5ರಂದು ಮೃತಪಟ್ಟಿದ್ದ.
ಇದರ ಬೆನ್ನಲ್ಲೆ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿತ್ತು. ಮೃತ ಬಾಲಕನ ಮನೆಯ ಸುತ್ತಲಿನ 3 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಪ್ರತ್ಯೇಕಿಸಿ, ಪ್ರತಿ ಮನೆಯಿಂದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು.