ಚೆನ್ನೈ: ಸಂಭಾವ್ಯ ಕೊರೊನಾ ಮೂರನೇ ಅಲೆ ಭೀತಿ ನಡುವೆ ತಮಿಳುನಾಡಿನಲ್ಲಿ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು ಆರೋಗ್ಯ ತಜ್ಞರ ಆತಂಕ ಹೆಚ್ಚಿಸಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಮಕ್ಕಳ ಸಂಖ್ಯೆ ತೀರ ಕಡಿಮೆಯಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಆರೋಗ್ಯ ಇಲಾಖೆ ಪ್ರಕಾರ ಜನವರಿ ತಿಂಗಳಿನಲ್ಲಿ 20326 ಮಕ್ಕಳಿಗೆ, ಅಂದರೆ 6% ಮಕ್ಕಳಿಗೆ ಸೋಂಕು ತಗುಲಿತ್ತು. ಮೇ ತಿಂಗಳಿನಲ್ಲಿ, ಕೊರೊನಾ ಎರಡನೇ ಅಲೆ ಸಂದರ್ಭ 71,555 ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಪ್ರಕರಣಗಳ ಸಂಖ್ಯೆ ಕುಸಿದಿದ್ದರೂ ಶೇಕಡಾವಾರು ಸಂಖ್ಯೆ ಏರಿಕೆಯಾಗಿದ್ದು, ಜೂನ್‌ನಲ್ಲಿ ಈ ಸಂಖ್ಯೆ 8.8% ಇದ್ದರೆ, ಜುಲೈ ತಿಂಗಳಿನಲ್ಲಿ 9.5% ಹಾಗೂ ಆಗಸ್ಟ್‌ನಲ್ಲಿ 10%ಗೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ನವಜಾತ ತೀವ್ರ ನಿಗಾ ಘಟಕ ಹಾಗೂ ಮಕ್ಕಳಲ್ಲಿ ಕೊರೊನಾ ನಿರ್ವಹಣೆಯ ರಾಜ್ಯದ ಕಾರ್ಯಪಡೆ ಸದಸ್ಯ ಡಾ. ಶ್ರೀನಿವಾಸನ್ ಈ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
'ಸಂಭಾವ್ಯ ಕೊರೊನಾ ಮೂರನೇ ಅಲೆಯಲ್ಲಿ ಭಾರತದಲ್ಲಿ ಸೋಂಕಿಗೆ ತುತ್ತಾಗುವ ಮಕ್ಕಳ ಪ್ರಮಾಣವು 12% ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಷ್ಟು ಮಕ್ಕಳಲ್ಲಿ 5% ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು ಹಾಗೂ ಆಸ್ಪತ್ರೆಗೆ ದಾಖಲಾದ ಎಲ್ಲಾ ಮಕ್ಕಳ ಸ್ಥಿತಿಯೂ ಗಂಭೀರವಾಗುವುದಿಲ್ಲ. ಚೆನ್ನೈನಲ್ಲಿನ ಮಕ್ಕಳ ಆರೋಗ್ಯ ಸಂಸ್ಥೆಗೆ ಸೋಂಕಿನಿಂದ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯೇ ಇದೆ. ಕೇವಲ ನಾಲ್ಕರಿಂದ ಎಂಟು ಮಕ್ಕಳು ಮಾತ್ರ ಆಸ್ಪತ್ರೆಗೆ ಸೇರಿದ್ದಾರೆ ಹಾಗೂ ಈ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಲಕ್ಷಣರಹಿತ ಅಥವಾ ಸೌಮ್ಯವಾದ ಲಕ್ಷಣ ಹೊಂದಿದ್ದ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆಯಷ್ಟೆ' ಎಂದು ವಿವರಿಸಿದ್ದಾರೆ.
10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಸೋಂಕು: ಇದಾಗ್ಯೂ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದು ಶ್ರೀನಿವಾಸನ್ ಉಲ್ಲೇಖಿಸಿದ್ದಾರೆ.
'ಹತ್ತು ವರ್ಷದೊಳಗಿನ ಮಕ್ಕಳಿಗೆ ವಿವಿಧ ರೋಗಗಳಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಇದು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿರುತ್ತದೆ. ಆದರೆ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಯಾವುದೇ ಲಸಿಕೆಗಳಿಲ್ಲ. ಹಾಗಾಗಿ 10 ವರ್ಷಕ್ಕೂ ಕಡಿಮೆ ವಯಸ್ಸಿನವರಿಗೆ ಹೋಲಿಸಿದರೆ, ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದು ಕೊರೊನಾ ಸೋಂಕು ತಗುಲಲು ಕಾರಣವಾಗಬಹುದು. ಈ ಬಗ್ಗೆ ಯಾವುದೇ ವೈಜ್ಞಾನಿಕ ಮಾಹಿತಿ ನಮಗೆ ಲಭ್ಯವಿಲ್ಲ. ಕಳೆದ ಒಂದು ವಾರದಿಂದ ಪ್ರತಿದಿನ ಕನಿಷ್ಠ 10 ವರ್ಷಕ್ಕಿಂತ ಮೇಲ್ಪಟ್ಟ ಒಂದು ಮಗು ಆಸ್ಪತ್ರೆಗೆ ದಾಖಲಾಗುತ್ತಿದೆ' ಎಂದು ಹೇಳಿದ್ದಾರೆ.
ಎಂಟು ತಿಂಗಳಿನಲ್ಲಿ 24 ಮಕ್ಕಳು ಸಾವು
ಕಳೆದ ಎಂಟು ತಿಂಗಳಿನಲ್ಲಿ ತಮಿಳುನಾಡಿನಲ್ಲಿ 24 ಮಕ್ಕಳು ಸಾವನ್ನಪ್ಪಿದ್ದಾರೆ. ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ಮರಣ ಪ್ರಮಾಣ ದಾಖಲಾಗಿದೆ. ಜೂನ್ ತಿಂಗಳಿನಲ್ಲಿ 13, ಮೇ ತಿಂಗಳಿನಲ್ಲಿ 8, ಜುಲೈನಲ್ಲಿ 2 ಏಪ್ರಿಲ್‌ನಲ್ಲಿ 1 ಸಾವು ದಾಖಲಾಗಿದೆ.
ಜೂನ್ ತಿಂಗಳಿನಲ್ಲಿ ಹೆಚ್ಚು ಮರಣ ಪ್ರಮಾಣ
ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು, ಅಂದರೆ 0.16% ಮರಣ ಪ್ರಮಾಣ ದಾಖಲಾಗಿರುವುದು ವರದಿಯಾಗಿದೆ. ಕ್ಯಾನ್ಸರ್ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ರಾಜ್ಯ ಮಕ್ಕಳಲ್ಲಿನ ಕೊರೊನಾ ಸೋಂಕು ನಿರ್ವಹಣಾ ಕಾರ್ಯಪಡೆಯ ಮತ್ತೊಬ್ಬ ಸದಸ್ಯೆ ಡಾ. ಥೇರಾನಿ ರಾಜನ್ ತಿಳಿಸಿದ್ದಾರೆ. ಸ್ಟೆರಾಯ್ಡ್ ಬಳಕೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದ ಮಕ್ಕಳಲ್ಲೂ ಸೋಂಕಿನ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಸಂದರ್ಭದಲ್ಲಿ ಕೊರೊನಾ ಸೋಂಕು ಮಕ್ಕಳಲ್ಲಿ ತೀವ್ರ ಗಂಭೀರ ಸ್ವರೂಪ ಪಡೆಯುವುದಿಲ್ಲ. ಅಸ್ವಸ್ಥತೆಯಿಲ್ಲದ ಮಕ್ಕಳು ಯಾವುದೇ ತೊಡಕಿಲ್ಲದೇ ಸೋಂಕಿನಿಂದ ಹೊರಬರುತ್ತಾರೆ. ಆದರೆ ಇತರೆ ರೋಗಗಳಿರುವ ಮಕ್ಕಳಲ್ಲಿ ಸೋಂಕು ಉಲ್ಬಣವಾಗುವ ಸಾಧ್ಯತೆಯಿದೆ. ಹೀಗಾಗಿ ಅವರು ಜಾಗರೂಕವಾಗಿರಬೇಕು. ಲಸಿಕೆ ದೊರೆಯುವವರೆಗೂ ರಕ್ಷಣೆ ಅತ್ಯಗತ್ಯ ಎಂದು ಹೇಳಿದ್ದಾರೆ.
ಮಕ್ಕಳಿಗೆ ಚಿಕಿತ್ಸೆ ನೀಡಲು ತಮಿಳುನಾಡಿನನಲ್ಲಿ ಸುಮಾರು 15 ಸಾವಿರ ವೈದ್ಯರು ಹಾಗೂ 30 ಸಾವಿರ ದಾದಿಯರಿಗೆ ತರಬೇತಿ ನೀಡಲಾಗಿದೆ.