ಕೊಚ್ಚಿ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು 30.245 ಕೆ.ಜಿ ಚಿನ್ನವನ್ನು ಬುಧವಾರ ಜಪ್ತಿ ಮಾಡಿದ್ದಾರೆ.
ತಿರುವನಂತಪುರದಲ್ಲಿರುವ ಯುಎಇಯ ಕಾನ್ಸುಲೆಟ್‌ನ ಮಾಜಿ ಉದ್ಯೋಗಿಗಳಾದ ಸರಿತ್ ಪಿ.ಎಸ್ ಹಾಗೂ ಸ್ವಪ್ನ ಸುರೇಶ್ ಅವರಿಗೆ ಸೇರಿದ 14 ಲಕ್ಷಕ್ಕೂ ಅಧಿಕ ನಗದನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಇ.ಡಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ 5ರಂದು ಗಲ್ಫ್‌ನಿಂದ ಬಂದ ಏರ್ ಕಾರ್ಗೊ ಬ್ಯಾಗ್‌ವೊಂದರಲ್ಲಿ 15 ಕೋಟಿ ಮೌಲ್ಯದ 30 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಇದನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ರಾಜತಾಂತ್ರಿಕ ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಕಸ್ಟಮ್ಸ್, ಎನ್‌ಐಎ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಪ್ರತ್ಯೇಕ ತನಿಖೆ ನಡೆಸುತ್ತಿವೆ.