ನವದೆಹಲಿ: ಒಡಿಶಾ, ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದ 'ಗುಲಾಬ್' ಚಂಡಮಾರುತ ಸದ್ಯ ದುರ್ಬಲಗೊಂಡಿದೆ. ಆದರೆ ಅಪರೂಪದ ಹವಾಮಾನ ಬದಲಾವಣೆಯಲ್ಲಿ, ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನು ಎರಡು ಮೂರು ದಿನಗಳಲ್ಲಿ 'ಶಾಹೀನ್' ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಗುಲಾಬ್ ಚಂಡಮಾರುತ ದುರ್ಬಲವಾದ ಬೆನ್ನಲ್ಲೇ ಸೆ.30ರಂದು ದೇಶದ ಕರಾವಳಿಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಈ ಚಂಡಮಾರುತಕ್ಕೆ ಕತಾರ್, 'ಶಾಹೀನ್' ಎಂಬ ಹೆಸರನ್ನು ನೀಡಿದೆ.
ಸದ್ಯ ಒಡಿಶಾ, ಆಂಧ್ರ ಪ್ರದೇಶದಲ್ಲಿ ಆರ್ಭಟಿಸಿದ್ದ ಗುಲಾಬ್ ಚಂಡಮಾರುತ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರಕ್ಕೆ ಹೋಗುತ್ತಿದ್ದಂತೆ ದುರ್ಬಲಗೊಳ್ಳಲಿದೆ. ಸೆ.30ರಂದು ಮತ್ತೆ ಪ್ರಬಲ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ. ಇದರ ಪ್ರಭಾವದಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಮುಂದೆ ಓದಿ...
ಮುಂದಿನ 6 ಗಂಟೆಗಳ ಕಾಲ ಈ ರಾಜ್ಯಗಳಲ್ಲಿ ಅಧಿಕ ಮಳೆ
ಗುಲಾಬ್ ಚಂಡಮಾರುತ ಪ್ರಸ್ತುತ ಪಶ್ಚಿಮ-ವಾಯುವ್ಯ ಭಾಗದತ್ತ ಮುಖ ಮಾಡಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಲಿದೆ. ತೆಲಂಗಾಣ ಹಾಗೂ ನೆರೆಹೊರೆಯ ಮರಾಠವಾಡ, ವಿದರ್ಭಾ ಹಾದು ಆನಂತರ ದುರ್ಬಲಗೊಳ್ಳಲಿದೆ. ಈ ಪ್ರದೇಶಗಳಲ್ಲಿ ಮುಂದಿನ 6 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮ್ಯಾನ್ಮಾರ್ ಕರಾವಳಿ ಜೊತೆಗೆ ಪೂರ್ವ-ಮಧ್ಯ ಹಾಗೂ ನೆರೆಯ ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯು ವಿಸ್ತರಿಸಿದೆ. ಇದರ ಪ್ರಭಾವದಡಿ ಮುಂದಿನ 12 ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ನೆರೆಯ ಬಾಂಗ್ಲಾದೇಶ ಕರಾವಳಿಯಲ್ಲಿ ಭಾರೀ ಮಳೆಯಾಗುವುದೆಂದು ಮಾಹಿತಿ ನೀಡಿದೆ.
ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತ ಪ್ರಭಾವ
ಮಹಾರಾಷ್ಟ್ರದಲ್ಲಿ ಚಂಡಮಾರುತ ಪ್ರಭಾವದಿಂದ ಮಂಗಳವಾರ ಆರಂಭಗೊಂಡು ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬೆಳವಣಿಗೆಗಳು ಕ್ಷೀಣಿಸುತ್ತಿದ್ದಂತೆ ಮತ್ತೊಂದು ಚಂಡಮಾರುತ ಶಾಹೀನ್, ಅರಬ್ಬೀ ಸಮುದ್ರದ ಮೇಲೆ ಗುಲಾಬ್ ಚಂಡಮಾರುತದ ಅವಶೇಷದಿಂದ ರೂಪುಗೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್‌ನಲ್ಲಿ 'ಶಾಹೀನ್' ಪ್ರಭಾವ
ಗುಲಾಬ್ ಚಂಡಮಾರುತದ ಪ್ರಭಾವದಡಿಯಲ್ಲಿ ಈಶಾನ್ಯ ಅರಬ್ಬಿ ಸಮುದ್ರ ಹಾಗೂ ನೆರೆಹೊರೆಯ ಗುಜರಾತ್ ಕರಾವಳಿ ಪ್ರದೇಶದಲ್ಲಿ ಗುರುವಾರ ಸಂಜೆ ವೇಳೆಗೆ ಶಾಹೀನ್ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇದರೊಂದಿಗೆ, ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ವಾಯುಭಾರ ಕುಸಿತದ ಪ್ರಭಾವದಿಂದ ಉತ್ತರ ಒಡಿಶಾದ ಕೆಲವು ಸ್ಥಳಗಳಲ್ಲಿ ಸೆಪ್ಟೆಂಬರ್ 30ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ತೀರಗಳಲ್ಲಿ ವ್ಯಾಪಕ ಮಳೆ ಸೂಚನೆ
ಶಾಹೀನ್ ಚಂಡಮಾರುತ ಪ್ರಭಾವದಿಂದಾಗಿ ಗುಜರಾತ್, ಮಹಾರಾಷ್ಟ್ರ, ಕೊಂಕಣ, ಗೋವಾದಲ್ಲಿ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಸೌರಾಷ್ಟ್ರ, ಕಚ್‌ನಲ್ಲಿ ಹಾಗೂ ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್‌ಗಡ, ಜಾರ್ಕಂಡ್, ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.