ಮುಂಬೈ: ಸತತ ಎರಡನೇ ವರ್ಷವೂ 'ಕೋವಿಡ್-19' ನೆರಳಿನಲ್ಲೇ ನಡೆದ ಗಣಪತಿ ವಿಸರ್ಜನಾ ಮಹೋತ್ಸವದ ಕೊನೆಯ ದಿನವಾದ ಭಾನುವಾರ ರಾತ್ರಿ, ಮುಂಬೈನಾದ್ಯಂತ ವಿವಿಧ ಜಲಮೂಲಗಳಲ್ಲಿ 34,452 ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಹತ್ತು ದಿನಗಳ ಗಣೇಶನ ಉತ್ಸವಕ್ಕೆ ಭಾನುವಾರ ರಾತ್ರಿ ತೆರೆಬಿತ್ತು. ಕೊನೆಯ ದಿನ ನಡೆದ ಗಣಪತಿ ವಿಸರ್ಜನೆಯ ವೇಳೆ ವರ್ಸೊವಾ ಜೆಟ್ಟಿ ಸಮುದ್ರದಲ್ಲಿ ಮೂವರು ಬಾಲಕರು ನಾಪತ್ತೆಯಾಗಿದ್ದಾರೆ. ಅವರೊಂದಿಗಿದ್ದ ಇಬ್ಬರು ಬಾಲಕರನ್ನು ರಕ್ಷಿಸಲಾಗಿದೆ. ಇವುಗಳನ್ನು ಹೊರತುಪಡಿಸಿ, ಮಹಾನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಗಣೇಶ ವಿಸರ್ಜನೆ ವೇಳೆ ಕೆರೆ, ಕಟ್ಟೆ, ಸಮುದ್ರಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ 13,442 ಕೃತಕ ಹೊಂಡಗಳನ್ನು ನಿರ್ಮಿಸಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಸುಮಾರು 5,043 ಸಾರ್ವಜನಿಕ ಗಣಪತಿ ಮಂಡಳಿಗಳು ಸ್ಥಾಪಿಸಿದ ಮೂರ್ತಿಗಳು, ಮನೆಗಳಲ್ಲಿ ಕೂರಿಸಿದ್ದ 29060 ಗಣಪತಿ ಮೂರ್ತಿ ಮತ್ತು 349 ಗೌರಿ ಮೂರ್ತಿಗಳನ್ನು ವಿಸರ್ಜಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮನೆಗಳಲ್ಲಿ ಗಣಪತಿ - ಗೌರಿ ಪ್ರತಿಷ್ಠಾಪಿಸಿದ್ದವರಿಗೆ, ಕೃತಕವಾಗಿ ನಿರ್ಮಿಸಿದ 11 387 ಹೊಂಡಗಳಲ್ಲಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು.