ತಿರುವನಂತಪುರಂ: ಭಾರತದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರ ಕಡಿತಗೊಳಿಸಿದ್ದರ ಬಗ್ಗೆ ಕೇರಳ ಹೈಕೋರ್ಟ್‌ನೀಡಿದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಬುಧವಾರ ಮೇಲ್ಮನವಿ ಸಲ್ಲಿಸಿದೆ.
ಸಾರ್ವಜನಿಕರು ಬಯಸಿದರೆ ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಾಲ್ಕು ವಾರಗಳ ನಂತರ ಎರಡನೇ ಡೋಸ್ ಪಡೆಯಬಹುದು ಎಂದು ಕೋರ್ಟ್ ಆದೇಶಿಸಿತ್ತು. ಇದರಿಂದ ಎರಡು ಡೋಸ್ ಲಸಿಕೆ ನಡುವಿನ 84 ದಿನಗಳ ಅಂತರದ ನೀತಿಗೆ ಧಕ್ಕೆಯಾಗಲಿದೆ. ದೇಶದ ಲಸಿಕೆ ನೀತಿಯು ಹಳಿ ತಪ್ಪಲಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಕಳೆದ ಸೆಪ್ಟೆಂಬರ್ 3ರಂದು ಕೇರಳ ಹೈಕೋರ್ಟ್ ಏಕಸದಸ್ಯ ಪೀಠವು ನೀಡಿದ ತೀರ್ಪಿಗೆ ತಡೆ ನೀಡಬೇಕು. ಇಲ್ಲದಿದ್ದರೆ ಕೊವಿಡ್-19 ವಿರುದ್ಧ ಕೇಂದ್ರ ಸರ್ಕಾರದ ಹೋರಾಟದಲ್ಲಿ ವಿಳಂಬವಾಗಲಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
84 ದಿನಗಳ ಅಂತರವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ
ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು ತನ್ನ ಉದ್ಯೋಗಿಗಳಿಗೆ 84 ದಿನಗಳೊಳಗೆ ಎರಡೂ ಡೋಸ್ ಕೊವಿಶೀಲ್ಡ್ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕಂಪನಿ ಪರ ವಾದ ಮಂಡಿಸಿದ ವಕೀಲ ಬ್ಲೆಜ್ ಕೆ ಜೋಸ್, ಉದ್ಯೋಗಿಗಳು 84 ದಿನ ಕಾಯುವುದಕ್ಕೆ ಬದಲು ನಾಲ್ಕು ವಾರಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲು ಅನುಮತಿಸುವಂತೆ ವಾದ ಮಂಡಿಸಿದ್ದರು. ಕಿಟೆಕ್ಸ್ ಕಂಪನಿಯು ತನ್ನ 5000ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದೆ. 93 ಲಕ್ಷ ರೂಪಾಯಿ ವೆಚ್ಚದಲ್ಲಿ ತನ್ನ ಉದ್ಯೋಗಿಗಲಿಗೆ ಎರಡನೇ ಡೋಸ್ ಲಸಿಕೆ ನೀಡುವುದಕ್ಕೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿದ. ಆದರೆ ಸದ್ಯ ಜಾರಿಯಲ್ಲಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ 84 ದಿನಗಳೊಳಗೆ ಎರಡನೇ ಡೋಸ್ ಲಸಿಕೆ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ
ಕಳೆದ ಸೆಪ್ಟೆಂಬರ್ 3ರಂದು ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಮೇಲ್ಮನವಿಯನ್ನು ಸಲ್ಲಿಸಿದೆ. ಕೊವಿಡ್-19 ಲಸಿಕೆ ವಿತರಣೆ ಸಮಸ್ಯೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಬದಲಿಗೆ ಭಾರತೀಯ ಸಂವಿಧಾನದಲ್ಲಿನ ಸಮಾನತೆ ಆಧಾರದಲ್ಲಿ ನೋಡಬೇಕು. ಆ ಮೂಲಕ ಭವಿಷ್ಯದಲ್ಲಿ ಎದುರಾಗುವ ಸಾಮಾಜಿಕ ವಿಪತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೂ ಮೊದಲು ಕಂಪನಿಯು ಸಲ್ಲಿಸಿದ ಅರ್ಜಿಗೆ ಕೇಂದ್ರ ಸರ್ಕಾರವು ಸಲ್ಲಿಸಿದ ಕೌಂಟರ್ ಅಫಿಡವಿಟ್ ನಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 84 ದಿನಗಳ ಅಂತರವಿದ್ದರೆ ಲಸಿಕೆಯು ಹೆಚ್ಚು ಸುರಕ್ಷಿತವಾಗಿರಲಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಉಲ್ಲೇಖಿಸಲಾಗಿತ್ತು.
ಸರ್ಕಾರದ ಮೇಲ್ಮನವಿಯಲ್ಲಿನ ಹೆಚ್ಚುವರಿ ಅಂಶಗಳೇನು?
"ಏಕ ಸದಸ್ಯ ಪೀಠ ನೀಡಿದ ಆದೇಶದಂತೆ ಒಂದು ವೇಳೆ ಕಿಟೆಕ್ಸ್ ಗಾರ್ಮೆಂಟ್ಸ್ ಕಂಪನಿಯು ಸಲ್ಲಿಸಿದ ಅರ್ಜಿಯನ್ನು ಗೌರವಿಸಲು ಸರ್ಕಾರಕ್ಕೆ ಒತ್ತಾಯಿಸಿದರೆ ಅದೇ ರೀತಿಯ ಇತರೆ ಕೈಗಾರಿಕೆಗಳು ಹಾಗೂ ಕಂಪನಿಗಳು ತಮ್ಮ ಹಕ್ಕಿಗಾಗಿ ಮುಂದೆ ಬರುತ್ತವೆ. ಆಗ ಸಂಘಟಿತ ಮತ್ತು ನಿಯಂತ್ರಿತ ಲಸಿಕೆ ವಿತರಣೆ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ," ಎಂದು ಮೇಲ್ಮನವಿ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ, "ಏಕ ನ್ಯಾಯಾಧೀಶರ ನಿರ್ಧಾರವು ನೆಲೆಗೊಂಡ ಸ್ಥಾನಕ್ಕೆ ವಿರುದ್ಧವಾಗಿದೆ, ವೈಜ್ಞಾನಿಕ ಅಧ್ಯಯನದಿಂದ ಬೆಂಬಲಿತವಾದ ಸರ್ಕಾರಿ ನೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಡಳಿತದ ದೃಷ್ಟಿಯಿಂದ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ಹೇರುವುದು ಅಥವಾ ಮಧ್ಯ ಪ್ರವೇಶ ಮಾಡುವಂತಿಲ್ಲ. "ಆದ್ದರಿಂದ, ತೀರ್ಪು ಕಾನೂನುಬಾಹಿರ, ತಪ್ಪಾದ ಮತ್ತು ಸಮರ್ಥನೀಯವಲ್ಲ," ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕೇರಳ ಕೋರ್ಟ್ ನೀಡಿದ ಆದೇಶದಲ್ಲಿ ಉಲ್ಲೇಖಿಸಿದ್ದು ಏನು?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನೀತಿಯ ಪ್ರಕಾರ, ನಿಗದಿಗೊಳಿಸಿದ ಅವಧಿ ಪೂರ್ವದಲ್ಲಿ ಲಸಿಕೆ ಪಡೆದುಕೊಳ್ಳುವುದಕ್ಕೆ ಕೆಲವು ಸಂದರ್ಭದಲ್ಲಿ ಅವಕಾಶ ನೀಡಬೇಕು. ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ಪಡೆದುಕೊಳ್ಳುವವರಿಗೂ ಈ ಅನುಮತಿಯನ್ನು ನೀಡಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ. ಕೇಂದ್ರ ಸರ್ಕಾರದ ಪ್ರಕಾರ, "ಕೊವಿಡ್-19 ಲಸಿಕೆ ವಿತರಣೆ ಸ್ವಯಂಪ್ರೇರಿತವಾಗಿದ್ದು, ಲಸಿಕೆ ಸ್ವೀಕರಿಸಲು ಯಾರಿಂದಲೂ ಯಾವುದೇ ರೀತಿ ಬಲವಂತವಿಲ್ಲ. ಆದ್ದರಿಂದ ಅವಶ್ಯಕತೆ ಮತ್ತು ಸೋಂಕಿನಿಂದ ಉತ್ತಮ ರೀತಿ ರಕ್ಷಣೆ ಒದಗಿಸಲು ಎರಡೂ ಡೋಸ್ ಲಸಿಕೆ ನೀಡುವುದನ್ನು ಸಲಹೆ ಎಂದು ಪರಿಗಣಿಸಬೇಕಿದೆ," ಎಂದು ಕೋರ್ಟ್ ಹೇಳಿದೆ.
ಲಸಿಕೆ ಪಡೆದುಕೊಳ್ಳಲು ನಿರಾಕರಿಸುವ ಹಕ್ಕನ್ನು ವ್ಯಕ್ತಿ ಹೊಂದಿರುತ್ತಾನೆ. ಮೂಲ ಪ್ರೋಟೋಕಾಲ್ ಪ್ರಕಾರ, ಅವರು ತಮ್ಮ ಪಾಕೆಟ್‌ನಿಂದ ಹಣ ಖರ್ಚು ಮಾಡಿ ಲಸಿಕೆ ಖರೀದಿಸುವಾಗ ರಾಜ್ಯ ಸರ್ಕಾರವು ಯಾವುದೇ ರೀತಿ ನಿಲುವು ತಾಳುವಂತಿಲ್ಲ. ನಾಲ್ಕು ವಾರಗಳ ನಂತರ ಎರಡನೇ ಡೋಸ್ ಅನ್ನು ಸ್ವೀಕರಿಸಲು ಅನುಮತಿಸಬಾರದು ಎಂದು ರಾಜ್ಯ ಸರ್ಕಾರ ಹೇಳುವುದಕ್ಕೆ ಯಾವುದೇ ಕಾರಣವಿಲ್ಲ ಎಂದಿತ್ತು.
ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಇರುವುದೇನು?
"ಭಾರತದ ರಾಷ್ಟ್ರೀಯ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ವೈಜ್ಞಾನಿಕ ಮತ್ತು ಸಾಂಕ್ರಾಮಿಕ ರೋಗ ಪುರಾವೆಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳು ಮತ್ತು ಜಾಗತಿಕ ಉತ್ತಮ ಅಭ್ಯಾಸಗಳ ಆಧಾರದ ಮೇಲೆ ರಚಿಸಲಾಗಿದೆ," ಎಂದು ಅಫಿಡವಿಟ್ ಆರಂಭದಲ್ಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋವಿಡ್ -19 ಲಸಿಕೆ ವಿತರಣೆ ಅಡಿಯಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಲಭ್ಯವಿರುವ ಮತ್ತು ಹೊಸ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಪರಿಷ್ಕರಣೆಗೆ ಒಳಪಡಿಸಲಾಗಿದೆ ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ಸಮಿತಿ(NEGVAC)ಯು ತಿಳಿಸಿತ್ತು.
"ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ಸಮಿತಿ(NEGVAC)ಯ ಶಿಫಾರಸ್ಸಿನ ಆಧಾರದ ಮೇಲೆ ರಾಷ್ಟ್ರೀಯ ಕೊರೊನಾವೈರಸ್ ಲಸಿಕೆ ಅಭಿಯಾನದಡಿ ನೀಡುವ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವೆ 12 ರಿಂದ 16 ವಾರಗಳ ಅಂತರವನ್ನು ನಿಗದಿಗೊಳಿಸಲಾಗಿದೆ. ಒಂದು ಮತ್ತು ಎರಡನೇ ಡೋಸ್ ಲಸಿಕೆ ನಡುವೆ 84 ದಿನಗಳ ಅಂತರವನ್ನು ಕಾಪಾಡುವುದರಿಂದ ಕೊವಿಡ್-19 ವಿರುದ್ಧ ಲಸಿಕೆಯು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರಲಿದೆ ಎಂದು ತಾಂತ್ರಿಕ ಸಮಿತಿಯೂ ಸಹ ಸಲಹೆ ನೀಡಿದೆ," ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.
ಅಂತರ ಹೆಚ್ಚಿಸುವುದರ ಹಿಂದೆ ವೈಜ್ಞಾನಿಕ ಆಧಾರ
ತೀರಾ ಅಗತ್ಯ ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಬೆಳಸಲು ಇಚ್ಛೀಸುವವರ ಅನುಕೂಲಕ್ಕಾಗಿ 12 ರಿಂದ 16 ವಾರಗಳಲ್ಲಿ ನಿಗದಿತ ಅವಧಿಗೂ ಪೂರ್ವದಲ್ಲಿ ಎರಡೂ ಡೋಸ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಆದರೆ ವೈಜ್ಞಾನಿಕ ಆಧಾರದಲ್ಲಿ ನೋಡುವುದಾದರೆ ಎರಡು ಡೋಸ್ ಕೊವಿಶೀಲ್ಡ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದ್ದಲ್ಲಿ ನಡುವಿನ ಅಂತರ ಕನಿಷ್ಠ 12 ರಿಂದ 16 ವಾರ ಇರಬೇಕಾಗುತ್ತದೆ. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು ವೈಜ್ಞಾನಿಕ ಕಾರಣ ಮತ್ತು ತಜ್ಞರ ಸಲಹೆಯೊಂದಿಗೆ ಸೂಕ್ತ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
83.39 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ 83.39 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 250 ದಿನಗಳಾಗಿದೆ. ದೇಶದಲ್ಲಿ ಈವರೆಗೂ 83,39,90,049 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 80,67,26,335 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.