ನವದೆಹಲಿ: ಎರಡೂ ಡೋಸ್ ಗಳ ಲಸಿಕೆ ಪಡೆದ ಹೊರತಾಗಿಯೂ ಕೋವಿಡ್-19 ನ ಕಾರಣದಿಂದಾಗಿ ಸಾವನ್ನಪ್ಪಿರುವ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದೆ.
ಪೂರ್ಣ ಪ್ರಮಾಣದ ಲಸಿಕೆ ಪಡೆದರೂ 4 ತಿಂಗಳ ಅವಧಿಯಲ್ಲಿ 5 ಮಂದಿ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಆರ್ ಟಿಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಆದರೆ ಲಸಿಕೆ ವಿಭಾಗ ಡೇಟಾ ಸಂಗ್ರಹಣೆ ಮಾಡಿಲ್ಲ. ಆದ್ದರಿಂದ ಆರೋಗ್ಯ ವಿಭಾಗದ ಕಾರ್ಯಕರ್ತರಿಗೆ ಲಸಿಕೆ ಪಡೆದ ಬಳಿಕ ಮತ್ತೊಮ್ಮೆ ಕೋವಿಡ್-19 ಸೋಂಕು ತಗುಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿಯಲ್ಲಿ ತಿಳಿಸಿದೆ.
ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಡೇಟಾ ವಿಶ್ಲೇಷಣೆಯಲ್ಲಿ ಒಂದು ಡೋಸ್ ಲಸಿಕೆ ಕೋವಿಡ್-19 ನಿಂದ ಉಂಟಾಗುವ ಸಾವುಗಳನ್ನು ತಡೆಯುವುದಕ್ಕೆ ಶೇ.96.6 ರಷ್ಟು ಪರಿಣಾಮಕಾರಿಯಾಗಿದ್ದು, ಎರಡೂ ಡೋಸ್ ಗಳನ್ನು ಪಡೆದರೆ ಶೇ.97.5 ರಷ್ಟು ಪರಿಣಾಮಕಾರಿಯಾಗಿರಲಿದೆ.
ಯಾವುದೇ ಲಸಿಕೆ ಶೇ.100 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿಲ್ಲ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಬಹುವಿಧದ ಆರೋಗ್ಯ ಸಮಸ್ಯೆಗಳು ಹಾಗೂ ರೋಗನಿರೋಧಕ ಶಕ್ತಿಯ ಅಂಶಗಳೂ ಸಹ ಲಸಿಕೆ ಹೇಗೆ ಕಾರ್ಯನಿರ್ವಹಣೆ ಮಾಡಲಿದೆ ಎಂಬುದನ್ನು ನಿರ್ಧರಿಸಲಿವೆ ಎಂದು ಏಮ್ಸ್ ನ ಪ್ರೊಫೆಸರ್ ಡಾ.ನೀರಜ್ ನಿಶ್ಚಲ್ ತಿಳಿಸಿದ್ದಾರೆ.