ಲಖನೌ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಕಳೆದ 10 ದಿನಗಳಲ್ಲಿ ಶಂಕಿತ ಡೆಂಗಿ ಹಾಗೂ ವೈರಲ್ ಜ್ವರದಿಂದಾಗಿ ಮಕ್ಕಳು ಸೇರಿದಂತೆ 41 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದರಿಂದಾಗಿ ಫಿರೋಜಾಬಾದ್‌ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮೃತಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.
: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಸರ್ಕಾರವು ಫಿರೋಜಾಬಾದ್‌ನ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಅಲ್ಲದೆ ಡಾ. ದಿನೇಶ್ ಕುಮಾರ್ ಪ್ರೇಮಿ ಅವರನ್ನು ನೂತನ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪರಿಸ್ಥಿತಿಯ ಅವಲೋಕನಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಂಡ ಫಿರೋಜಾಬಾದ್‌ಗೆ ತಲುಪಿದೆ.
ಆಗಸ್ಟ್ 22-23ರಿಂದ ಶಂಕಿತ ಡೆಂಗಿಯಿಂದಾಗಿ ಜಿಲ್ಲೆಯಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಮನೀಷ್ ಅಸಿಜಾ ಹೇಳಿದ್ದರು. ಆದರೆ ಇದುವರೆಗೆ 56 ಮಂದಿ ಮೃತಪಟ್ಟಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದರು.
ಸೋಮವಾರದಂದು ಡೆಂಗಿ ರೋಗಿಗಳನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ತಂಡಕ್ಕೆ ಸೂಚನೆ ನೀಡಿದ್ದರು.