ಜಕಾರ್ತ: ಇಂಡೋನೇಷ್ಯಾದ ಜೈಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 41 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 41 ಜನರು ಮೃತಪಟ್ಟಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ತಿಳಿಸಿದ್ದಾರೆ.
ಅವಘಡಕ್ಕೆ ಕಾರಣವನ್ನು ತಿಳಿಯಲು ತನಿಖೆ ಕೈಗೊಳ್ಳಲಾಗಿದೆ. ಬುಧವಾರ ಮಧ್ಯರಾತ್ರಿ 1 ರಿಂದ 2 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಅಧಿಕಾರಿಗಳು ಇನ್ನೂ ಕಾರಾಗೃಹದಲ್ಲಿದ್ದವರನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಬ್ಲಾಕ್ ನಲ್ಲಿ ಮಾದಕದ್ರವ್ಯ-ಸಂಬಂಧಿತ ಅಪರಾಧಗಳನ್ನು ಇರಿಸಲಾಗಿದೆ. ಇಲ್ಲಿ ಸುಮಾರು 122 ಜನರನ್ನು ಇರಿಸಲಾಗಿತ್ತು ಎನ್ನಲಾಗಿದೆ. ಈ ಜೈಲಿಗೆ 600 ಮಂದಿಯನ್ನು ಇರಿಸುವ ಸಾಮರ್ಥ್ಯವಿದ್ದು, ಇಲ್ಲಿ 2000 ಮಂದಿಯನ್ನು ಇರಿಸಲಾಗಿದೆ ಎನ್ನಲಾಗಿದೆ.
ಕ್ರೋಧಿತ ಕೈದಿಗಳಿಂದಲೇ ಬೆಂಕಿ
ಮತ್ತೊಂದು ಮೂಲದ ಪ್ರಕಾರ ಜೈಲಿನ ಅವ್ಯವಸ್ಥೆಯಿಂದ ರೊಚ್ಚಿಗೆದ್ದಿದ್ದ ಕೈದಿಗಳೇ ಜೈಲಿಗೆ ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೆಂಕಿ ಅವಘಡ ವೇಳೆ ಹಲವು ಕೈದಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.