ಪಟನಾ: ಭಾರತೀಯ ಕ್ರಿಕೆಟ್ ಪ್ರೀತಿಯಿಂದ ಬಿಸಿಸಿಐ ಕೋಟ್ಯಂತರ ರೂಪಾಯಿ ಸಂಪಾದಿಸಿದೆ. ಅದೇ ರೀತಿ ಕ್ರಿಕೆಟ್ ಪಂದ್ಯದ ಮೇಲಿನ ಪ್ರೀತಿಯಿಂದ ಕೋಟಿ ರೂಪಾಯಿ ಸಂಪಾದಿಸಿದ ಅಭಿಮಾನಿಯೊಬ್ಬನ ಕಥೆಯನ್ನು ಕೇಳಿದ್ದೀರಾ? ಬಿಹಾರದ ಕ್ರಿಕೆಟ್ ಪ್ರೇಮಿಯೊಬ್ಬ ಐಪಿಎಲ್ ಪಂದ್ಯದ ಬಗೆಗಿನ ಸರಿಯಾದ ಲೆಕ್ಕಾಚಾರದಿಂದಾಗಿ ಇದೀಗ ಕೋಟ್ಯಧಿಪತಿಯಾಗಿದ್ದಾನೆ!
ಕ್ರಿಕೆಟ್ ಫ್ಯಾಂಟಸಿ ಸ್ಪರ್ಧೆಯಾದ 'ಡ್ರೀಮ್ ಇಲೆವೆನ್' ಆಯಪ್‌ನಲ್ಲಿ ಕೇವಲ 49 ರೂಪಾಯಿ ಹೂಡಿಕೆ ಮಾಡಿದ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೊಬ್ಬ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದಾನೆ. ಸ್ಥಳೀಯ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಆತನ ಬದುಕು ಇದೀಗ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ.
ಭಾನುವಾರ ನಡೆದ ಕೆಕೆಆರ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ನಡುವಿನ ಪಂದ್ಯಕ್ಕೆ ಅಶೋಕ್ ಕುಮಾರ್ ಹೆಸರಿನ ಬಡ ಕ್ಷೌರಿಕ ಸರಿಯಾದ ಲೆಕ್ಕಾಚಾರದೊಂದಿಗೆ 49 ರೂಪಾಯಿಗೆ ಮೆಗಾ ಕಾಂಟೆಸ್ಟ್‌ನಲ್ಲಿ ತಂಡವನ್ನು ಹಾಕಿದ್ದ. ಅವರ ತಂಡ ಗರಿಷ್ಠ ಅಂಕಗಳನ್ನು ಕಲೆಹಾಕುವ ಮೂಲಕ 1 ಕೋಟಿ ರೂಪಾಯಿ ಬಹುಮಾನವನ್ನು ಗೆದ್ದುಕೊಟ್ಟಿದೆ.
ಈ ಹಣದಿಂದ ತಮ್ಮ ಸಾಲವನ್ನೆಲ್ಲ ಮೊದಲಿಗೆ ತೀರಿಸಲು ಬಯಸಿರುವ ಅಶೋಕ್ ಕುಮಾರ್, ಬಳಿಕ ಮನೆಯೊಂದನ್ನು ನಿರ್ಮಿಸಲಿದ್ದಾರೆ. ಮುಂದಿನ 2 ದಿನಗಳಲ್ಲಿ ಹಣ ತಮ್ಮ ಖಾತೆಗೆ ಸಂದಾಯವಾಗುವ ನಿರೀಕ್ಷೆ ಇದೆ. ತೆರಿಗೆಯನ್ನು ಕಳೆದು ಅವರು ಸುಮಾರು 70 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ.